ಕೇಂದ್ರದ ಸೂಚನೆಯಂತೆ ಡಿಕೆಶಿ ಹೊಟೇಲ್ ಪ್ರವೇಶಕ್ಕೆ ತಡೆ: ಕೆ.ಸಿ.ವೇಣುಗೋಪಾಲ್ ಆರೋಪ

Update: 2019-07-10 13:21 GMT

ಬೆಂಗಳೂರು, ಜು. 10: ಕೇಂದ್ರದ ಅಣತಿಯಂತೆ ಮಹಾರಾಷ್ಟ್ರ ಸರಕಾರ ಸಚಿವ ಡಿ.ಕೆ.ಶಿವಕುಮಾರ್ ಹೊಟೇಲ್ ಪ್ರವೇಶಕ್ಕೆ ತಡೆ ಹಿಡಿದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಬಿಜೆಪಿ ಕೈ ಹಾಕಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಇಲ್ಲಿನ ಕೃಮಾರಕೃಪ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಮಹಾರಾಷ್ಟ್ರದ ಹೊಟೇಲ್ ಪ್ರವೇಶಿಸದಂತೆ ತಡೆ ಹಿಡಿದಿರುವುದು ಸಲ್ಲ. ಶಿವಕುಮಾರ್ ಕೊಠಡಿ ಬುಕ್ ಮಾಡಿದ್ದರೂ ತಡೆ ಹಿಡಿದಿರುವುದರ ಹಿಂದೆ ಬಿಜೆಪಿ ಹುನ್ನಾರವಿದೆ ಎಂದು ದೂರಿದರು.

ಮೈತ್ರಿ ಸರಕಾರ ಅಸ್ಥಿರಕ್ಕೆ ಪ್ರಯತ್ನಿಸುತ್ತಿಲ್ಲ ಎಂದು ಬಿಜೆಪಿ ಹೇಳುತ್ತಲೇ ಮತ್ತೊಂದು ಕಡೆ ತೆರೆ ಮರೆಯಲ್ಲಿ ನಾಟಕವಾಡುತ್ತಿದೆ. ರಾಜೀನಾಮೆ ನೀಡಿರುವ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಇರುವುದಾಗಿ ಖುದ್ದು ಶಾಸಕರೆ ಪ್ರಕಟಿಸಿದ್ದಾರೆಂದು ಅವರು ಸ್ಪಷ್ಟಪಡಿಸಿದರು.

ರಾಜೀನಾಮೆ ನೀಡಿರುವ ಶಾಸಕರೆಲ್ಲರೂ ಶಿವಕುಮಾರ್ ಸ್ನೇಹಿತರು. ಅವರನ್ನು ಭೇಟಿ ಮಾಡುವ ಅಧಿಕಾರ ಅವರಿಗೆ ಇದೆ. ಆದರೆ, ಕೇಂದ್ರ ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಶಿವಕುಮಾರ್ ಹೊಟೇಲ್ ಭೇಟಿಗೆ ನಿರ್ಬಂಧಿಸಲಾಗಿದೆ ಎಂದ ಅವರು, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಲಾಗುವುದು ಎಂದರು.

ರಾಮಲಿಂಗಾರೆಡ್ಡಿ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಜತೆ ಮಾತುಕತೆ ನಡೆಸಿದ್ದು ಮನವೊಲಿಸುವ ಪ್ರಯತ್ನ ನಡೆಸಿದ್ದೇವೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲಿದ್ದಾರೆಂದ ಅವರು, ಮೈತ್ರಿ ಸರಕಾರದ ವಿರುದ್ಧದ ಬಿಜೆಪಿ ಸಂಚನ್ನು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News