ಅತೃಪ್ತ ಶಾಸಕರಿರುವ ಹೊಟೇಲ್‌ನಲ್ಲಿ ಬಿಜೆಪಿಯ ಆರ್.ಅಶೋಕ್, ಕೆ.ಜಿ.ಬೋಪಯ್ಯ ಪ್ರತ್ಯಕ್ಷ

Update: 2019-07-10 14:57 GMT
 ಕೆ.ಜಿ.ಬೋಪಯ್ಯ-ಆರ್.ಅಶೋಕ್

ಬೆಂಗಳೂರು, ಜು. 10: ‘ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಯಾವುದೇ ಪ್ರಯತ್ನ ನಡೆಸುತ್ತಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ಮುಂಬೈನಲ್ಲಿರುವ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರೊಂದಿಗೆ ಬಿಜೆಪಿ ಮುಖಂಡರಾದ ಆರ್.ಅಶೋಕ್, ಕೆ.ಜಿ. ಬೋಪಯ್ಯ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ರಮೇಶ್‌ಕುಮಾರ್ ತಿಳಿಸಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೆ ಮುಂಬೈಗೆ ತೆರಳಿದ ಬಿಜೆಪಿಯ ಉಭಯ ನಾಯಕರು ಅತೃಪ್ತ ಶಾಸಕರೊಂದಿಗೆ ಸಭೆ ನಡೆಸಿದ್ದು, ಕ್ರಮಬದ್ಧ ರೂಪದಲ್ಲಿ ರಾಜೀನಾಮೆ ಸಲ್ಲಿಸಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಅಲ್ಲದೆ, ‘ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಬೇಡಿ, ರಾಜೀನಾಮೆ ತ್ವರಿತ ಅಂಗೀಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ನಿಮ್ಮ ಪರ ಅರ್ಜಿ ಸಲ್ಲಿಸಿದ್ದು, ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ರಾಜ್ಯಪಾಲರು ನಮಗೆ ಬೆಂಬಲವಾಗಿದ್ದಾರೆ’ ಎಂದು ಅತೃಪ್ತರ ಮನವೊಲಿಕೆ ಮಾಡಿದ್ದಾರೆ.

ಹೀಗಾಗಿಯೇ ಅತೃಪ್ತ ಶಾಸಕರು ತಮ್ಮ ಭೇಟಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ಅವರನ್ನು ವಾಪಸ್ ಹೋಗುವಂತೆ ಕೋರಿದ್ದಾರೆ. ಈಗಾಗಲೇ 17 ಮಂದಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಮೈತ್ರಿ ಸರಕಾರದ ಬಲ ಕುಸಿಯುತ್ತಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯದಲ್ಲಿ ಸರಕಾರ ರಚನೆ ಉತ್ಸಾಹದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News