ಮುಂಬೈ ಪೊಲೀಸರ ದುರ್ನಡತೆ ಸರಿಯಲ್ಲ: ಡಿ.ಕೆ.ಶಿವಕುಮಾರ್

Update: 2019-07-10 15:00 GMT

ಮುಂಬೈ, ಜು.10: ಮುಂಬೈ ಪೊಲೀಸರು ನಮ್ಮನ್ನು ನಗರದಿಂದ ಹೊರಗೆ ಕಳುಹಿಸಬೇಕೆಂದು ಆದೇಶವಿದೆ ಎನ್ನುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನೀತಿ. ಸರಕಾರಗಳು ಬರುತ್ತವೆ, ಹೋಗುತ್ತವೆ, ಪಕ್ಷಗಳು ಇರುತ್ತವೆ, ಹೋಗುತ್ತವೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಈ ರೀತಿ ದುರ್ನಡತೆ ಮಾಡುತ್ತಿರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈ ನಗರಕ್ಕೆ ಮೊದಲಿನಿಂದಲೂ ಒಂದು ಉತ್ತಮ ಸಂಸ್ಕೃತಿಯಿದೆ. ಆದರೆ, ಈ ಅಧಿಕಾರಿಗಳ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಈ ಎಲ್ಲ ಬೆಳವಣಿಗೆಗಳಲ್ಲಿ ನಮ್ಮ ಯಾವುದೇ ಕೈವಾಡವಿಲ್ಲವೆಂದು ಬಿಜೆಪಿಯ ಸ್ನೇಹಿತರು ಹೇಳುತ್ತಿದ್ದಾರೆ. ಆದರೆ, ಏನೆಲ್ಲಾ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ಈಗಲೂ ನನಗೆ ನಂಬಿಕೆಯಿದೆ, ನಮ್ಮ ಎಲ್ಲ ಸ್ನೇಹಿತರು ವಾಪಸ್ ಬರುತ್ತಾರೆ. ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾವು ಕೂತು ಪರಸ್ಪರ ಚರ್ಚೆ ಮಾಡಿ ಬಗೆಹರಿಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಎಂಟಿಬಿ ನಾಗರಾಜ್, ಸುಧಾಕರ್ ರಾಜೀನಾಮೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ನಮ್ಮನ್ನು ಮುಂಬೈಯಿಂದ ಹೊರಗೆ ಹಾಕುತ್ತಿದ್ದಾರೆ. ವಿಮಾನ ನಿಲ್ದಾಣದವರೆಗೆ ನಮ್ಮನ್ನು ಬಿಡಲು ಪೊಲೀಸರು ಮುಂದಾಗಿದ್ದಾರೆ. ಇದು ಸರಿಯಲ್ಲ. ಇಲ್ಲಿನ ಮುಖ್ಯಮಂತ್ರಿ ನನಗೆ ಆಪ್ತರು. ಆದರೆ, ಕೆಲವು ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಗಾರಿದ ಶಿವಕುಮಾರ್, ನನ್ನ ನಡೆ ಶಾಸಕರನ್ನು ಭೇಟಿ ಮಾಡಬೇಕು, ಅವರ ಜೊತೆ ಮಾತನಾಡಲೇಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News