ಮೈತ್ರಿ ಸರಕಾರದ ದುಃಸ್ಥಿತಿಗೆ ಎಚ್‌ಡಿಕೆ-ರೇವಣ್ಣ ಕಾರಣ: ಎಂಟಿಬಿ ನಾಗರಾಜ್

Update: 2019-07-10 15:41 GMT

ಬೆಂಗಳೂರು, ಜು.10: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಮೈತ್ರಿ ಸರಕಾರಕ್ಕೆ ಈ ದುಃಸ್ಥಿತಿ ಬಂದಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಆರೋಪಿಸಿದರು.

ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದವರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂದು ದೂರಿದರು.

ತಮಗೆ ಇಷ್ಟ ಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದರು. ಎಚ್.ಡಿ. ಕುಮಾರಸ್ವಾಮಿ ಆಡಳಿತದಿಂದ ಬೇಸತ್ತು ಅತೃಪ್ತರು ಮುಂಬೈಗೆ ಹೋಗಿದ್ದಾರೆ. ರಾಜೀನಾಮೆ ಕೊಟ್ಟು ಹೋಗಿರುವವರು ದುಡ್ಡಿಗಾಗಿ ಹೋದವರಲ್ಲ. ಅವರ ಬಳಿ ಹಣ ಇದೆ ಎಂದು ನಾಗರಾಜ್ ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೆರಳುತ್ತಿದ್ದ ಸುಧಾಕರ್‌ನನ್ನು ತಡೆ ಹಿಡಿದ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಎಂ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು, ಸಚಿವ ಕೆ.ಜೆ.ಜಾರ್ಜ್ ಅವರ ಕೊಠಡಿಗೆ ಕರೆದೊಯ್ದರು. ಈ ವೇಳೆ ಸುಧಾಕರ್ ಬೆಂಬಲಿಗರು, ಬಿಜೆಪಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಎನ್.ರವಿಕುಮಾರ್, ಬಿಜೆಪಿ ಸಹ ವಕ್ತಾರ ಆನಂದ್, ಸುಧಾಕರ್ ಅವರನ್ನು ಹೊರಗೆ ಕಳುಹಿಸಿಕೊಡುವಂತೆ ಪ್ರತಿಭಟನೆ ನಡೆಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಸುಧಾಕರ್ ಮನವೊಲಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿ, ಒಂದು ಗಂಟೆಗೂ ಹೆಚ್ಚು ಕಾಲ ಅವರ ಮನವೊಲಿಕೆಗೆ ಪ್ರಯತ್ನಿಸಿದರು. ಈ ವೇಳೆ ಜಾರ್ಜ್ ಕೊಠಡಿ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಶಾಸಕರು, ಸುಧಾಕರ್‌ನನ್ನು ಹೊರಗೆ ಕಳುಹಿಸಿಕೊಡುವಂತೆ ಅಲ್ಲಿ ಪ್ರತಿಭಟನೆ ನಡೆಸಿದರು.

ರೇಣುಕಾ-ಖಾದರ್ ವಾಗ್ವಾದ: ರಾಜೀನಾಮೆ ನೀಡಿರುವ ಸುಧಾಕರ್ ಅವರನ್ನು ಬಲವಂತದಿಂದ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ವಿಶ್ವನಾಥ್ ಸೇರಿದಂತೆ ಇನ್ನಿತರರು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪ್ರತಿಭಟನೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ವಿಧಾನಸೌಧಕ್ಕೆ ಬಂದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಪ್ರತಿಭಟನಾನಿರತರನ್ನು ನೋಡಿ ನಿಮಗೆ ನಾಚಿಕೆ ಆಗುವುದಿಲ್ಲವೇ? ಈ ರೀತಿ ಪ್ರತಿಭಟನೆ ಮಾಡಲು ಎಂದರು. ಈ ವೇಳೆ ಆಕ್ರೋಶಗೊಂಡ ರೇಣುಕಾಚಾರ್ಯ ನಮಗೇಕೆ ನಾಚಿಕೆಯಾಗಬೇಕೆಂದು ಏರು ಧ್ವನಿಯಲ್ಲಿ ತಿರುಗೇಟು ನೀಡಿದರು. ಈ ವೇಳೆ ಉಭಯ ಮುಖಂಡರ ನಡುವೆ ವಾಗ್ವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News