ಮಲಗುಂಡಿ ಸ್ವಚ್ಛತೆಗೆ ಕಾರ್ಮಿಕರನ್ನು ನೇಮಿಸಿದ ವ್ಯಕ್ತಿಗಳಿಗೆ ಶಿಕ್ಷೆಯಾಗಿರುವ ವರದಿಯಿಲ್ಲ: ಕೇಂದ್ರ

Update: 2019-07-10 18:53 GMT

ಹೊಸದಿಲ್ಲಿ, ಜು.10: ಜಾತಿಯಾಧಾರಿತ ವೃತ್ತಿ ಮಾನವ ಮಲ ಸ್ವಚ್ಛಗೊಳಿಸುವಿಕೆಯನ್ನು 1993ರಲ್ಲಿ ಹಾಗೂ ಮತ್ತೊಮ್ಮೆ 2013ರಲ್ಲಿ ನಿಷೇಧಿಸಲಾಗಿದ್ದರೂ ಈ ಅಮಾನವೀಯ ಕೆಲಸ ಈಗಲೂ ಚಾಲ್ತಿಯಲ್ಲಿದೆ ಎಂದು ಒಪ್ಪಿಕೊಂಡಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಮಲ ಹೊರಲು ಮಾನವ ಕಾರ್ಮಿಕರನ್ನು ನೇಮಿಸುವ ವ್ಯಕ್ತಿಗಳಿಗೆ ಶಿಕ್ಷೆಯಾಗಿರುವ ಬಗ್ಗೆ ರಾಜ್ಯಗಳು ಅಥವಾ ಕೇಂದ್ರಾಡಳಿತಗಳು ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಬುಧವಾರ ಲೋಕಸಭೆಗೆ ತಿಳಿಸಿದೆ.

ವಿಷ್ಣು ದಯಾಳ್ ರಾಮ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮದಾಸ ಅಠಾವಳೆ, ದೇಶದಲ್ಲಿ 53,398 ಮಾನವ ಮಲಹೊರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಆದರೆ ಅಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಬಗ್ಗೆ ಯಾವುದೇ ವರದಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಲಹೊರುವ ಕಾರ್ಮಿಕರಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ, 2013ರಂತೆ, ತಮ್ಮ ವ್ಯಾಪ್ತಿಯಲ್ಲಿ ಮಾನವ ಮಲ ಹೊರುವವರನ್ನು ನೇಮಿಸಲಾಗಿಲ್ಲ ಎನ್ನುವುದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಯಾವುದೇ ಸಹಾಯಕ ಪ್ರಾಧಿಕಾರ ಖಚಿತಪಡಿಸಿಕೊಳ್ಳಬೇಕು ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಜರುಗಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮಲಗುಂಡಿ ಮತ್ತು ಒಳಚರಂಡಿಗಳಲ್ಲಿ 88 ಮಲ ಹೊರುವ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ದಿಲ್ಲಿಯಲ್ಲಿ ಅತ್ಯಧಿಕ 18 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಠಾವಳೆ ತಿಳಿಸಿದ್ದಾರೆ. ಮೃತಪಟ್ಟ 88 ಕಾರ್ಮಿಕರ ಪೈಕಿ 36 ಮಂದಿಯ ಕುಟುಂಬಗಳಿಗೆ ಸರಕಾರದಿಂದ ತಲಾ 10 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. 1993ರಿಂದೀಚೆಗೆ ಇಂತಹ 620 ಸಾವುಗಳು ವರದಿಯಾಗಿದ್ದು 445 ಕುಟುಂಬಗಳಿಗೆ ಸಂಪೂರ್ಣ ಪರಿಹಾರ ಮೊತ್ತ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News