ವಂಚನೆ ಪ್ರಕರಣ: ಹೀರಾ ಗ್ರೂಪ್ ನ ನೌಹೇರಾ ಶೇಖ್ ಬಳ್ಳಾರಿ ಪೊಲೀಸ್ ವಶಕ್ಕೆ

Update: 2019-07-11 16:23 GMT

ಬಳ್ಳಾರಿ, ಜು.11: ವಂಚನೆ ಆರೋಪ ಪ್ರಕರಣ ಸಂಬಂಧ ಎಂಇಪಿ ಪಕ್ಷದ ಸಂಸ್ಥಾಪಕಿ ಹಾಗೂ ಹೀರಾ ಗೋಲ್ಡ್ ಕಂಪೆನಿಯ ನಿರ್ದೇಶಕಿ ನೌಹೇರಾ ಶೇಖ್ ಅವರನ್ನು ಹೈದರಾಬಾದ್‌ನಲ್ಲಿ ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಂದ ಮೂರು ಸಾವಿರ ಕೋಟಿ ಹಣ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಆರೋಪ ನೌಹೇರಾ ಶೇಖ್ ಮೇಲಿದೆ. ಈಗಾಗಲೇ ಆಂಧ್ರ ಪೊಲೀಸರ ವಶದಲ್ಲಿ ಹೈದ್ರಾಬಾದ್‌ನ ಚಂಚಲಗೂಡು ಜೈಲಿನಲ್ಲಿದ್ದ ನೌಹೇರಾ ಶೇಖ್ ಅವರನ್ನು ಬಳ್ಳಾರಿ ಪೊಲೀಸರು ಗುರುವಾರ ತಮ್ಮ ವಶಕ್ಕೆ ಪಡೆದರು.

ಪ್ರಕರಣದ ಹಿನ್ನೆಲೆ?: ಹೊಸಪೇಟೆ ಮೂಲದ ಬಳ್ಳಾರಿ ಭಾಷಾ ಎಂಬುವರ ದೂರಿನ ಮೇರೆಗೆ ನೌಹೇರಾ ಶೇಖ್ ಅವರನ್ನು ವಿಚಾರಣೆ ನಡೆಸಲು ವಶಕ್ಕೆ ಪಡೆಯಲಾಗಿದೆ. ದೂರುದಾರ ಭಾಷಾ ಅವರಿಗೆ ಶೇಕಡ 36 ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಆತನ ಕುಟುಂಬದ ಐವರಿಗೆ ವಂಚನೆ ಮಾಡಲಾಗಿದೆ ಎನ್ನಲಾಗಿದೆ.

ನೌಹೇರಾ ಶೇಖ್ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧ ಭಾಗಗಳ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಗೊತ್ತಾಗಿದೆ. 2018 ಮೇ ತಿಂಗಳ ಬಳಿಕ ನೌಹೇರಾ ಅವರ ವಂಚನೆ ಹೂಡಿಕೆದಾರರಿಗೆ ಅರಿವಾಗುತ್ತಾ ಬಂದಿದ್ದು, ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ನೌಹೇರಾ ಅವರ ಹೆಸರಿನಲ್ಲಿ 24 ಬೇನಾಮಿ ಆಸ್ತಿ ಹಾಗೂ 182 ಬ್ಯಾಂಕ್ ಖಾತೆಗಳು ಇವೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News