ಬಿಜೆಪಿಯಿಂದ ಅತೃಪ್ತ 12 ಶಾಸಕರಿಗೆ ಸಚಿವ ಸ್ಥಾನ ?

Update: 2019-07-11 16:42 GMT

ಬೆಂಗಳೂರು, ಜು.11: ದಿನದಿಂದ ದಿನಕ್ಕೆ ರಾಜೀನಾಮೆ ನೀಡುವ ಶಾಸಕರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ಸರಕಾರ ರಚನೆ ಮಾಡಲು ಕನಸು ಕಾಣುತ್ತಿರುವ ಬಿಜೆಪಿಯು ಇದೀಗ ಸಚಿವ ಸ್ಥಾನಗಳ ಹಂಚಿಕೆಯ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಮೈತ್ರಿ ಸರಕಾರದಲ್ಲಿನ ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿರುವ ಬಿಜೆಪಿಯು ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸುತ್ತಿದೆ. ಆದರೆ, ಇದೀಗ ಸರಕಾರ ರಚನೆ ಮಾಡಿದರೆ ಯಾರು ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಗೊಂದಲ ಉಂಟಾಗಿದೆ. ಆರಂಭದಲ್ಲಿ ರಾಜೀನಾಮೆ ನೀಡಿದ 13 ಶಾಸಕರಲ್ಲಿ 12 ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಸರಕಾರದಲ್ಲಿ ಒಟ್ಟು 35 ಸಚಿವ ಸ್ಥಾನಗಳಿದ್ದು, ಅದರಲ್ಲಿ ಅತೃಪ್ತರಿಗೆ 12 ಹಂಚಿಕೆಯಾದರೆ ಉಳಿದ 23 ರಲ್ಲಿ ಬಿಜೆಪಿ ಹಾಲಿ ಸದಸ್ಯರಿಗೆ ಹಂಚಬೇಕು. ಆದರೆ, ರಾಜೀನಾಮೆ ನೀಡುತ್ತಿರುವ ಸಂಖ್ಯೆ ಇನ್ನೂ ಅಧಿಕವಾಗುತ್ತಿದ್ದು, ಅವರೆಲ್ಲರೂ ಸೂಕ್ತ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಇದೀಗ ರಾಜೀನಾಮೆ ನೀಡಿದವರಲ್ಲಿ ಆನಂದ್‌ಸಿಂಗ್, ರಾಮಲಿಂಗಾರೆಡ್ಡಿ, ರೋಷನ್‌ಬೇಗ್, ರಮೇಶ್ ಜಾರಕಿಹೊಳಿ ಸಚಿವರಾಗಿದ್ದು, ಸೇವೆ ಸಲ್ಲಿಸಿದ್ದವರು. ಇನ್ನು ಎಂ.ಟಿ.ಬಿ.ನಾಗರಾಜ ಹಾಲಿ ಸಚಿವರಾಗಿದ್ದರೆ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಮುನಿರತ್ನ ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರು.

ವಿಶೇಷ ಸ್ಥಾನಮಾನ: ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬೇಗ್ ಇದುವರೆಗೂ ಬಹಿರಂಗವಾಗಿ ಬಿಜೆಪಿಗೆ ಸೇರುವ ಕುರಿತು ಹೇಳಿಕೊಂಡಿಲ್ಲ. ಇವರು ಇಬ್ಬರೂ ಕಾಂಗ್ರೆಸ್‌ನಲ್ಲಿ ಹಿರಿಯರಾಗಿದ್ದು, ಸಚಿವ ಸ್ಥಾನ ನೀಡಲೇಬೇಕಿದೆ. ಅಲ್ಲದೆ, ಇವರಿಗೆ ವಿಶೇಷ ಸ್ಥಾನಮಾನ ನೀಡುವ ಕುರಿತು ಚಿಂತನೆ ನಡೆದಿದೆ. ಇನ್ನುಳಿದಂತೆ ರಾಜೀನಾಮೆ ನೀಡಿರುವ ಮಾಜಿ ಸಚಿವರಿಗೂ ಸ್ಥಾನ ನೀಡಲೇಬೇಕಿದೆ. ಹೀಗಾಗಿ, ಸರಕಾರ ರಚನೆ ಕುರಿತು ಗಂಭೀರ ಚಿಂತನೆ ನಡೆದಿದ್ದು, ಈ ಕುರಿತೂ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News