ಮಾಜಿ ಸ್ಪೀಕರ್-ಯಡಿಯೂರಪ್ಪ ಭೇಟಿ: ರಾಜೀನಾಮೆ ಪತ್ರಗಳ ಕುರಿತ ಚರ್ಚೆ

Update: 2019-07-11 16:47 GMT

ಬೆಂಗಳೂರು, ಜು.11: ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಕ್ರಮಬದ್ಧತೆಗೆ ಸಂಬಂಧಿಸಿದಂತೆ ಮಾಜಿ ಸ್ವೀಕರ್ ಕೆ.ಜಿ.ಬೋಪಯ್ಯ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆಗೆ ಅವರ ನಿವಾಸದಲ್ಲಿಂದು ಸಮಾಲೋಚನೆ ನಡೆಸಿದರು.

ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಬೋಪಯ್ಯ ನೇರವಾಗಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಸುದೀರ್ಘವಾಗಿ ರಾಜೀನಾಮೆಗಳ ಸಂಬಂಧ ಚರ್ಚೆ ನಡೆಸಿದರು. ಸ್ಪೀಕರ್ ರಮೇಶ್ ಕುಮಾರ್ 9 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳ ಪ್ರತಿಗಳನ್ನು ಪರಿಶೀಲನೆ ಮಾಡಿ ಹೊಸದಾಗಿ ರಾಜೀನಾಮೆ ಪತ್ರಗಳನ್ನು ಸಿದ್ಧಪಡಿಸಲು ಬೋಪಯ್ಯ, ಶಾಸಕರಿಗೆ ಅಗತ್ಯ ನೆರವು ನೀಡಿದ್ದು, ಎಲ್ಲ ಮಾಹಿತಿಯನ್ನು ಯಡಿಯೂರಪ್ಪಗೆ ನೀಡಿದರು.

ಶಾಸಕರು ಖುದ್ದಾಗಿ ಬಂದು ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವ ಬದಲು ಫ್ಯಾಕ್ಸ್ ಮೂಲಕ ಸ್ಪೀಕರ್ ಕಚೇರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಖುದ್ದು ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅವರು ನೇರವಾಗಿಯೇ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು ಸೂಚನೆ ನೀಡಿರುವುದಾಗಿ ಯಡಿಯೂರಪ್ಪಗೆ ಬೋಪಯ್ಯ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.

ಸ್ಪೀಕರ್ ತೀರ್ಮಾನ ಪ್ರಕಟಿಸಲೇಬೇಕಿರುವ ಕಾರಣ ರಮೇಶ್ ಕುಮಾರ್ ನಿರ್ಣಯ ನೋಡಿ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಸುಪ್ರೀಂಕೋರ್ಟ್ ನಾಳೆ(ಜು.12) ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ಅಂಗೀಕರಿಸಲಿದ್ದಾರೆ. ಆದರೂ ಅವರ ನಡೆ ಏನು ಎಂದು ನೋಡಿ ನಾವು ಮತ್ತೆ ನಿರ್ಧಾರ ಕೈಗೊಳ್ಳೋಣ ಎಂದು ಯಡಿಯೂರಪ್ಪಗೆ ಬೋಪಯ್ಯ ವಿವರಿಸಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News