ಪಕ್ಷೇತರ ಶಾಸಕರನ್ನು ಭೇಟಿಯಾಗಲು ಮುಂಬೈಗೆ ಹೋಗಿದ್ದೆ: ಆರ್.ಅಶೋಕ್

Update: 2019-07-11 16:54 GMT

ಬೆಂಗಳೂರು, ಜು.11: ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್‌ರನ್ನು ಭೇಟಿ ಮಾಡಲು ನಾನು ಮುಂಬೈಗೆ ಹೋಗಿದ್ದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಗೇಶ್ ರಾಜೀನಾಮೆ ನೀಡಿದ ಸಂದರ್ಭದಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡುವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅತೃಪ್ತರೊಂದಿಗೆ ಇದ್ದ ನಾಗೇಶ್‌ರನ್ನು ಭೇಟಿಯಾಗಲು ಹೋಗಿದ್ದೆ. ಮುಂಬೈಗೆ ಹೋಗಲು ಇದೇ ಕಾರಣ, ಇದು ಬಿಟ್ಟರೆ ಬೇರೆ ಏನು ಇಲ್ಲ. ಬೇರೆ ಯಾರನ್ನೂ ಭೇಟಿಯಾಗಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಸಂಜೆಯೊಳಗೆ ತೀರ್ಮಾನ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದು ಉತ್ತಮ ಬೆಳವಣಿಗೆ. ಇಲ್ಲದಿದ್ದರೆ, ಸ್ಪೀಕರ್ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದ ಅವರು, ಸುಪ್ರೀಂಕೋರ್ಟ್‌ನಿಂದ ಹೇಳಿಸಿಕೊಂಡು ನಿರ್ಧಾರ ಕೈಗೊಳ್ಳುವ ಸ್ಥಿತಿ ಸ್ಪೀಕರ್‌ಗೆ ಬಂದಿರುವುದು ಅವಮಾನಕರ ಸಂಗತಿ ಎಂದರು.

ವಿಧಾನಸಭೆಯಲ್ಲಿ ಮೈತ್ರಿ ಸರಕಾರದ ಸಂಖ್ಯಾಬಲ ಕುಸಿದಿದ್ದು, ಮುಖ್ಯಮಂತ್ರಿಗೆ ಮರ್ಯಾದೆ ಎನ್ನುವುದು ಇದ್ದರೆ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರಿಗೆ ಯಾವುದೂ ಇಲ್ಲ, ಅದಕ್ಕಾಗಿ ವಿಧಾನಸೌಧದಲ್ಲಿ ಕೂತಿದ್ದಾರೆ ಎಂದ ಅಶೋಕ್, ಈ ಹಿಂದೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಆಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗಲೂ ಸಿಎಂ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದಕ್ಕೂ ನಮಗೂ ಸಂಬಂಧ ಇಲ್ಲ. ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ, ಮಾಡೋದು ಇಲ್ಲ. ಅದು ಅವರ ಆಂತರಿಕ ಜಗಳ. ದೇವೇಗೌಡರನ್ನು ಸಿದ್ದರಾಮಯ್ಯ ಸೋಲಿಸಿದರು, ಸಿದ್ದರಾಮಯ್ಯರನ್ನು ದೇವೇಗೌಡ ಸೋಲಿಸಿದರು. ಅವರ ಒಳಜಗಳದಿಂದ ಸರಕಾರ ಪತನವಾಗಿದೆ. ಬಿಜೆಪಿ ಸರಕಾರ ರಚಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News