ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಶಾಸಕ ರಾಘವೇಂದ್ರ ಹಿಟ್ನಾಳ್

Update: 2019-07-11 17:02 GMT

ಕೊಪ್ಪಳ, ಜು.11: ಶಾಸಕರ ರಾಜೀನಾಮೆಯ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೊಪ್ಪಳ ಕ್ಷೇತ್ರದ ಶಾಸಕ ಕೈ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಆರೋಪಿಸಿದ್ದಾರೆ.

ಕೊಪ್ಪಳದಲ್ಲಿಂದು ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ನಾನು ಹಾಗೂ ಕುಷ್ಟಗಿ ಶಾಸಕ ಅಮರೇಗೌಡರು ಸಿದ್ದರಾಮಯ್ಯ ಅವರ ಆಪ್ತರು. ಆದರೆ, ಆಪ್ತರೆಲ್ಲರೂ ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ದರೆ ನಾವು ಹೋಗಬೇಕಿತ್ತು ಅಲ್ವಾ. ಯಾಕೆ ಹೋಗಲಿಲ್ಲ ಎಂದ ಅವರು, ಇದೆಲ್ಲಾ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಎಂದು ದೂರಿದರು.

ಆಪರೇಷನ್ ಕಮಲಕ್ಕೆ ಒಂದು ವೇಳೆಗೆ ಸಿದ್ದರಾಮಯ್ಯ ಅವರು ಕಾರಣವಾಗಿದ್ದರೆ ನಮ್ಮನ್ನ ಯಾಕೆ ಕಳಿಸಿಲ್ಲ ಎಂದು ರಾಘವೇಂದ್ರ ಹಿಟ್ನಾಳ್ ಪ್ರಶ್ನೆ ಮಾಡಿದ್ದು, ಕೆಲವರು ಆಮಿಷಕ್ಕೆ ಒಳಗಾಗಿದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಬಿಜೆಪಿ ಹಣದ ಆಮಿಷ, ಅಧಿಕಾರದ ಆಸೆ ತೋರಿಸಿ ಸರಕಾರವನ್ನು ಅಸ್ಥಿರ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸರಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಈಗ ರಾಜೀನಾಮೆ ನೀಡಿರುವವರು ಕಾರ್ಯಕರ್ತರ ಬಳಿ ಚರ್ಚಿಸದೇ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಹಿಟ್ನಾಳ್ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News