ರೆನೈಸನ್ಸ್ ಹೊಟೇಲ್ ವಿರುದ್ಧ ಕಾನೂನು ಕ್ರಮ: ಡಿ.ಕೆ.ಶಿವಕುಮಾರ್

Update: 2019-07-11 17:05 GMT

ಬೆಂಗಳೂರು, ಜು.11: ಮುಂಬೈಯಲ್ಲಿ ಹೊಟೇಲ್‌ನಲ್ಲಿ ಕೊಠಡಿ ಕಾಯ್ದಿರಿಸಿಕೊಂಡು ಹೋಗಿದ್ದೆ. ಆದರೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೊಠಡಿಯನ್ನು ರದ್ದುಗೊಳಿಸುವ ಮೂಲಕ, ರೆನೈಸನ್ ಹೊಟೇಲ್‌ನವರು ವ್ಯಾವಹಾರಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಗುರುವಾರ ನಗರದ ಕುಮಾರಕೃಪಾ ಅತಿಥಿಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಟೇಲ್‌ನಲ್ಲಿ ಉಳಿದುಕೊಂಡಿದ್ದ ಶಾಸಕರು ನಮ್ಮ ಜೊತೆ ಮಾತನಾಡಲು ಬಯಸದಿದ್ದರೆ ಪರವಾಗಿಲ್ಲ. ಆದರೆ, ಕನಿಷ್ಠ ನಮಗೆ ಹೊಟೇಲ್ ಒಳಗೆ ಹೋಗಿ ಸ್ನಾನ ಮಾಡಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಮುಂಬೈಗೆ ಬರುತ್ತಿರುವ ವಿಚಾರವನ್ನು ಅಲ್ಲಿನ ಸರಕಾರಕ್ಕೂ ಮಾಹಿತಿ ನೀಡಿ ಹೋಗಿದ್ದೆ. ಆದರೆ, ನಾಲ್ಕೈದು ಜನ ಶಾಸಕರು, ನನ್ನ ಹಾಗೂ ಮುಖ್ಯಮಂತ್ರಿಯ ಹೆಸರು ಹಾಕಿ, ಇವರಿಬ್ಬರನ್ನೂ ಭೇಟಿ ಮಾಡಲು ಇಷ್ಟವಿಲ್ಲವೆಂದು ದೂರು ನೀಡಿದ್ದರು ಎಂದು ಪೊಲೀಸರು ನಮಗೆ ಮಾಹಿತಿ ನೀಡಿದರು. ಆದರೆ, ನನ್ನ ಜೊತೆ ಬಂದಿದ್ದ ಬೇರೆ ಸಚಿವರು, ಶಾಸಕರಿಗಾದರೂ ಅವರ ಭೇಟಿಗೆ ಅವಕಾಶ ನೀಡಬಹುದಿತ್ತಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದರು.

ಮುಂಬೈಯಿಂದ ಹೊರಗೆ ಹಾಕಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರಕಾರ ನಡೆದುಕೊಳ್ಳುವ ರೀತಿ ಇದಲ್ಲ. ನಮಗೆ ಅಲ್ಲಿಂದಲೂ ಕೆಲವು ಮಾಹಿತಿ ಇದ್ದಿದ್ದರಿಂದ ನಾನು ಹೋಗಿದ್ದೆ. ಈ ನಡುವೆ ಹೊಟೇಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರಿಂದ ರೂಮಿನ ಕಾರ್ಡ್ ಕೊಟ್ಟಿದ್ದರು. ಆದರೆ, ನನ್ನುನ್ನು ಹೊಟೇಲ್ ಒಳಗೆ ಹೋಗದಂತೆ ಪೊಲೀಸರು ತಡೆದರು ಎಂದು ಅವರು ಹೇಳಿದರು.

ಹೊಟೇಲ್ ಹೊರಗೆ ಬೆಳಗ್ಗೆಯಿಂದ ಕಾಯುತ್ತಿದ್ದ ನಮಗೆ 11 ಗಂಟೆ ವೇಳೆಗೆ ಹೊಟೇಲ್‌ನವರು ಬಂದು, ಪತ್ರವನ್ನು ನೀಡಿ ಕಾಯ್ದಿರಿಸಿದ್ದ ಕೊಠಡಿಯನ್ನು ರದ್ದುಪಡಿಸಿರುವುದಾಗಿ ತಿಳಿಸಿದರು. ಒಬ್ಬ ನಾಗರಿಕ, ವ್ಯವಹಾರಸ್ಥನಾದ ನನ್ನ ಹಕ್ಕನ್ನು, ವ್ಯಾವಹಾರಿಕ ನಿಯಮಗಳನ್ನು ಹೊಟೇಲ್‌ನವರು ಉಲ್ಲಂಘಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಆದುದರಿಂದ, ನಾನು ಕಾನೂನು ತಜ್ಞರ ಜೊತೆಗೆ ಸಂಪರ್ಕ ಮಾಡಿ, ಕಾನೂನು ಪ್ರಕಾರ ಈ ಹೊಟೇಲ್ ಹಾಗೂ ಬೇರೆ ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತಿದ್ದೇನೆ. ಕಾನೂನಿನ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News