ಪಕ್ಷಾಂತರಿಗಳು ನಾಯಿಗಿಂತ ಕಡೆ: ವಾಟಾಳ್ ನಾಗರಾಜ್

Update: 2019-07-11 17:28 GMT

ಬೆಂಗಳೂರು, ಜು.11: ವಿಧಾನಸಭೆ ಒಳಗೆ ನಾಯಿಗಳನ್ನು ಬಿಟ್ಟರೂ ಅವು ಗಂಭೀರವಾಗಿ ಇರುತ್ತವೆ. ಆದರೆ, ಈ ಪಕ್ಷಾಂತರಿಗಳು ಅವುಗಳಿಗಿಂತ ಕಡೆಯಾಗಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಈ ಪಕ್ಷಾಂತರಿಗಳು ಮಾಡಿರುವ ಅವಾಂತರದಿಂದ, ವಿಧಾನಸೌಧದಲ್ಲಿ ಹಾಗೂ ಸುತ್ತಮುತ್ತಲು ಪ್ರದೇಶದಲ್ಲಿ ಪೊಲೀಸರ ಸರ್ಪಗಾವಲು ಇರುವುದು ಪ್ರಜಾಪ್ರಭುತ್ವದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ವಿಶ್ವದಲ್ಲೆ ಉತ್ತಮವಾದ ಹೆಸರಿದೆ. ಆದರೆ, ಇವತ್ತಿನ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ನಾನು 1962ರಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. 1964ರಲ್ಲಿ ಕಾರ್ಪೋರೇಟರ್, 1967ರಲ್ಲಿ ವಿಧಾನಸಭೆ ಸದಸ್ಯನಾಗಿ ಚುನಾಯಿತನಾಗಿ ಕೆಲಸ ಮಾಡಿದ್ದೇನೆ. ನನ್ನ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂತಹ ವ್ಯವಸ್ಥೆ ಎಂದಿಗೂ ನೋಡಿರಲಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧದ ಒಳಗೆ ಬರಲು ನನಗೆ ಪೊಲೀಸರು ಅವಕಾಶ ನೀಡಿಲ್ಲ. ನಗರ ಪೊಲೀಸ್ ಆಯುಕ್ತರು ಹೊಸಬರು, ಅವರಿಗೆ ಕರ್ನಾಟಕದ ಇತಿಹಾಸ ಗೊತ್ತಿಲ್ಲ, ವಾಟಾಳ್ ನಾಗರಾಜ್ ಯಾರು ಎಂದು ಗೊತ್ತಿಲ್ಲ. ಪರಿಸ್ಥಿತಿ ಹೀಗಿದೆ. ವಿಧಾನಸೌಧದ ಹೊರಗೆ ಪೊಲೀಸರ ರೌಡಿಸಂ ನಡೆಯುತ್ತಿದೆ. ಸ್ಪೀಕರ್‌ಗೆ ಕರೆ ಮಾಡಿದ ಬಳಿಕ ನನ್ನನ್ನು ಒಳಗೆ ಬರಲು ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News