ಕಾರ್ನಾಡ್, ಶಿವಳ್ಳಿ, ಗೋಪಾಲ ಭಂಡಾರಿ ಸೇರಿ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2019-07-12 12:23 GMT

ಬೆಂಗಳೂರು, ಜು. 12: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್, ಸಚಿವ ಸಿ.ಎಸ್. ಶಿವಳ್ಳಿ, ಮಾಜಿ ಸಚಿವ ಧನಂಜಯ ಕುಮಾರ್ ಹಾಗೂ ಗೋಪಾಲ ಭಂಡಾರಿ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶುಕ್ರವಾರ ವಿಧಾನ ಮಂಡಲ ಉಭಯ ಸದನಗಳ ಕಲಾಪ ಮಧ್ಯಾಹ್ನ 1ಗಂಟೆಯ ಸುಮಾರಿಗೆ ಆರಂಭಗೊಳ್ಳುತ್ತಿದ್ದಂತೆ ಕ್ರಮವಾಗಿ ಸಭಾಪತಿ ಪ್ರತಾಪ ಚಂದ್ರಶೆಟ್ಟಿ ಮತ್ತು ಸ್ಪೀಕರ್ ರಮೇಶ್‌ ಕುಮಾರ್ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರು.

ಪ್ರಗತಿಪರ ಚಿಂತಕ, ನಾಟಕಕಾರ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್, ಸಚಿವ ಸಿ.ಎಸ್.ಶಿವಳ್ಳಿ, ಮಾಜಿ ಸಚಿವ ಧನಂಜಯ ಕುಮಾರ್, ಕೆ.ಎಂ.ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ದಮಯಂತಿ ಬೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನಪೆಂಡಿಮಠ, ಡಾ.ವಿಜಯಕುಮಾರ ಖಂಡ್ರೆ, ಗೋಪಾಲ ಭಂಡಾರಿ, ಶಾರದವ್ವ ಪಟ್ಟಣ, ಡಾ.ಎನ್.ಬಿ.ನಂಜಪ್ಪ, ಎಂ.ಸತ್ಯನಾರಾಯಣ, ಸಂಭಾಜಿ ಪಾಟೀಲ್ ಸೇರಿದಂತೆ ಅಗಲಿದ ಗಣ್ಯರನ್ನು ಸ್ಮರಿಸಲಾಯಿತು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ಆ ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರಕ್ಕೆ ಕಲಾಪ ಮುಂದೂಡಿಕೆ: ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ಅವರು ಅಧಿವೇಶನ ಕಲಾಪವನ್ನು ಸೋಮವಾರಕ್ಕೆ (ಜು.15) ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News