ರೆಸಾರ್ಟ್‌ನತ್ತ ಮುಖ ಮಾಡಿದ ಬಿಜೆಪಿ ಶಾಸಕರು

Update: 2019-07-12 12:41 GMT

ಬೆಂಗಳೂರು, ಜು.12: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ವಯಂಪ್ರೇರಿತವಾಗಿ ವಿಶ್ವಾಸಮತ ಯಾಚಿಸುವ ಹೇಳಿಕೆ ನೀಡಿದ ಬೆನ್ನಲ್ಲೆ, ವಿರೋಧ ಪಕ್ಷ ಬಿಜೆಪಿ ಪಾಳಯದಲ್ಲಿ ಚಿಂತನೆ ಮನೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯ ಯಾವ ಶಾಸಕರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಸೆಳೆಯಲು ಅವಕಾಶ ನೀಡಬಾರದೆಂದು, ಎಲ್ಲ 105 ಶಾಸಕರನ್ನು ದೊಡ್ಡಬಳ್ಳಾಪುರ ಬಳಿಯ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿದೆ.

ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಕೂಡಲೇ, ವಿಧಾನಸೌಧದಲ್ಲಿನ ತಮ್ಮ ಕಚೇರಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಪ್ರಮುಖ ನಾಯಕರೊಂದಿಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸುಪ್ರೀಂಕೋರ್ಟ್ ಆದೇಶದಿಂದ ಅತೃಪ್ತ ಶಾಸಕರಿಗೆ ನೈತಿಕ ಬಲ ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಎಲ್ಲ ಶಾಸಕರು ಸೋಮವಾರದ ವರೆಗೆ ಒಂದು ಕಡೆ ಇರಬೇಕೆಂಬ ಉದ್ದೇಶದಿಂದ ಎಲ್ಲರೂ ರೆಸಾರ್ಟ್‌ಗೆ ತೆರಳುತ್ತಿದ್ದೇವೆ. ಮುಂದಿನ ತೀರ್ಮಾನವನ್ನು ಸಭೆ ನಡೆಸಿ ಆನಂತರ ತೆಗೆದುಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News