ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ನಂಬಿಕೆಯಿಲ್ಲ: ಸಿದ್ದರಾಮಯ್ಯ

Update: 2019-07-12 13:02 GMT

ಬೆಂಗಳೂರು, ಜು.12: ಸದನದಲ್ಲಿ ಯಾವ ರೀತಿ ವಿಶ್ವಾಸಮತ ಗೆಲ್ಲುತ್ತೇವೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ವಿಶ್ವಾಸಮತ ಯಾಚನೆಯ ನಿರ್ಣಯ ಮಂಡನೆ ಮಾಡಿದಾಗ ಅದೆಲ್ಲ ಗೊತ್ತಾಗುತ್ತೆ. ಆದರೆ, ಇದಕ್ಕಾಗಿ ನಾವು ಯಾವುದೇ ಆಪರೇಷನ್ ಮಾಡಲ್ಲ, ಅದರಲ್ಲಿ ನಮಗೆ ನಂಬಿಕೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸದನದಲ್ಲಿ ವಿಶ್ವಾಸಮತ ಯಾಚಿಸುತ್ತೇನೆ, ಸಮಯ ನಿಗದಿ ಮಾಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ವಿಶ್ವಾಸವಿಲ್ಲದೆ ವಿಶ್ವಾಸ ಮತ ಯಾಚಿಸಲು ಯಾರಾದರೂ ಮುಂದಾಗುತ್ತಾರಾ? ಮುಖ್ಯಮಂತ್ರಿಗೆ ವಿಶ್ವಾಸವಿದೆ, ಆದುದರಿಂದಲೇ ಈ ನಿರ್ಣಯ ಕೈಗೊಂಡಿದ್ದಾರೆ ಎಂದರು.

ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ, ಇಂದು ಮುಖ್ಯಮಂತ್ರಿ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ಆರೋಗ್ಯಕರ ಮನಸ್ಸಿನಿಂದಾಗಿ ನಾವು ಆರಾಮವಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಕುರಿತು ನೀಡಿರುವ ತೀರ್ಪಿನ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಪ್ರಕಾರ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಸ್ಪೀಕರ್, ವಿಧಾನಪರಿಷತ್ತಿನಲ್ಲಿ ಸಭಾಪತಿಯವರು ಶಾಸಕರ ರಾಜೀನಾಮೆ ಅಂಗೀಕರಿಸುವುದು ಅಥವಾ ಅವರನ್ನು ಅನರ್ಹಗೊಳಿಸುವ ಅಧಿಕಾರ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ಕೆಲವು ಶಾಸಕರನ್ನು ಅನರ್ಹಗೊಳಿಸುವಂತೆ ಈಗಾಗಲೇ ನಾವು ಸ್ಪೀಕರ್‌ಗೆ ಪೆಟಿಷನ್ ನೀಡಿದ್ದೇವೆ. ಅವರು ಈ ಸಂಬಂಧ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಬಗ್ಗೆ ನಾವು ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಯಾಕೆ ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಅವರ ಶಾಸಕರ ಮೇಲೆ ಅವರಿಗೆ ನಂಬಿಕೆಯಿಲ್ಲ. ಅವರಲ್ಲಿ ಕೆಲವು ಕರಿ ಕುರಿಗಳಿವೆ, ಅದಕ್ಕಾಗಿ ಅವರಿಗೆ ಭಯ. ನಮಲ್ಲಿದ್ದ ಕರಿ ಕುರಿಗಳೆಲ್ಲವೂ ಹೊರಗೆ ಹೋಗಿವೆ. ಈಗ ನಮ್ಮದೇನು ಇಲ್ಲ ಎಂದು ಅವರು ತಿಳಿಸಿದರು.

ಅತೃಪ್ತ ಶಾಸಕರ ಜೊತೆ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್ ಚರ್ಚೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಿಂದ ಅಮಾನತ್ತುಗೊಂಡಿರುವ ರೋಶನ್ ಬೇಗ್ ಹೊರತುಪಡಿಸಿ, ರಾಮಲಿಂಗಾರೆಡ್ಡಿ ಸೇರಿದಂತೆ ಎಲ್ಲರ ಜೊತೆ ನಾವು ಮಾತನಾಡುತ್ತಿದ್ದೇವೆ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್, ಸುಧಾಕರ್ ಮುಂಬೈಗೆ ಹೋಗಿಲ್ಲ. 10 ಜನ ಮಾತ್ರ ಹೋಗಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ ಹಾಗೂ ಗೌರವ ಹೆಚ್ಚಾಗಿರಬೇಕು. ನನ್ನ ಎದೆ ಬಗೆದರೆ ಅಲ್ಲಿ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದು ಈ ಹಿಂದೆ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ನನಗೆ ಗೊತ್ತಿಲ್ಲ. ಈಗ ಎದೆ ಬಗೆಯಲು ಆಗುವುದಿಲ್ಲವಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News