ಕಾರ್ನಾಡರ ವೈಚಾರಿಕತೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಿತ್ತು: ಕೋಟಾ ಶ್ರೀನಿವಾಸ ಪೂಜಾರಿ

Update: 2019-07-12 13:22 GMT

ಬೆಂಗಳೂರು, ಜು.12: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡರ ವೈಚಾರಿಕ ಚಿಂತನೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಕಷ್ಟ ಆಗಿತ್ತು ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಅಭಿಪ್ರಾಯಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಅಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಗಿರೀಶ್ ಕಾರ್ನಾಡರು ನಾಟಕಕಾರರಾಗಿ, ಸಿನೆಮಾ ನಿರ್ದೇಶಕರಾಗಿ ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದರ ನಡುವೆ ಅವರು ವ್ಯಕ್ತಪಡಿಸುತ್ತಿದ್ದ ವೈಚಾರಿಕ ಚಿಂತನೆಗಳಲ್ಲಿರುವ ಅಭಿಪ್ರಾಯ ಭೇದವನ್ನು ಅರ್ಥ ಮಾಡಿಕೊಳ್ಳಲು ನನಗೆ ಕಷ್ಟವಾಗಿತ್ತು ಎಂದು ತಿಳಿಸಿದರು.

ನಾವೆಲ್ಲರೂ ನಕ್ಸಲ್‌ರನ್ನು ವಿರೋಧಿಸುತ್ತಿದ್ದಾಗ ಗಿರೀಶ್ ಕಾರ್ನಾಡರು ನಾನು ನಕ್ಸಲ್ ಎಂದು ಬಹಿರಂಗವಾಗಿ ಘೋಷಿಸಿದ್ದರು. ಹಾಗೆಯೆ ಕಾಣದ ದೇವರನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದರು. ಅದರಂತೆಯೆ ಯಾವ ಧರ್ಮದ ಆಚರಣೆಗಳಿಲ್ಲದ ಅವರ ಅಂತ್ಯಕ್ರಿಯೆಯನ್ನು ಸರಳವಾಗಿ ನಡೆಸಲಾಯಿತು ಎಂದು ಅವರು ಸ್ಮರಿಸಿದರು.

ಗಿರೀಶ್ ಕಾರ್ನಾಡ್ ರಚಿಸಿರುವ ಎಲ್ಲ ನಾಟಕಗಳಲ್ಲೂ ಮಹಿಳಾ ಪರವಾದ ಚಿಂತನೆಗಳನ್ನು ಕೇಂದ್ರೀಕರಿಸಿ ರಚಿಸುವ ಮೂಲಕ ಸಮಾಜದ ಬದಲಾವಣೆಯಲ್ಲಿ ತಮ್ಮದೆ ಆದ ಕಾಣಿಕೆ ಸಲ್ಲಿಸಿದ್ದಾರೆ. ಅವರ ಧ್ವನಿಯನ್ನು ರಂಗಶಂಕರದಲ್ಲಿ ಹಿನ್ನೆಲೆಯ ಧ್ವನಿಯಾಗಿ ಬಳಸಿಕೊಂಡಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗಷ್ಟೆ ನಿಧನರಾದ ದಕ್ಷಿಣ ಕನ್ನಡದ ಮಾಜಿ ಶಾಸಕ ಗೋಪಾಲ ಭಂಡಾರಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ ಅವರ ವಿರುದ್ಧ ಅನೇಕ ವಾಗ್ದಾಳಿ ನಡೆಸಿದ್ದೆ. ಅದ್ಯಾವುದರ ಬಗೆಗೂ ಹಗೆಯನ್ನು ಸಾಧಿಸದೆ ನನ್ನೊಂದಿಗೆ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News