ಕನ್ನಡ ಅನುಷ್ಠಾನ ನಿರ್ಲಕ್ಷ್ಯ: ಪಿಡಿಓ ಅಮಾನತಿಗೆ ಜಿಲ್ಲಾಧಿಕಾರಿ ಸೂಚನೆ

Update: 2019-07-12 14:45 GMT

ಬೆಳಗಾವಿ, ಜು.11: ಹಿಂಡಲಗಾ ಗ್ರಾಮ ಪಂಚಾಯತಿಯಲ್ಲಿ ಬೇರೆ ಭಾಷೆಯಲ್ಲಿ ರಸೀದಿ ನೀಡುವ ಜತೆಗೆ ಆಡಳಿತದಲ್ಲಿ ಕನ್ನಡ ಅನುಷ್ಠಾನವನ್ನು ನಿರ್ಲಕ್ಷಿಸಿರುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಓ) ಯನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂಡಲಗಾ ಪಂಚಾಯತಿಯಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಿಲ್ಲ ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಅನಂತಕುಮಾರ್ ಬ್ಯಾಕೂಡ ಮತ್ತಿತರರು ಒಕ್ಕೊರಲಿನಿಂದ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎ.ಎಂ.ಪಾಟೀಲ ಅವರು, ಈಗಾಗಲೇ ಸಂಬಂಧಿಸಿದ ಪಂಚಾಯತಿ ಅಧಿಕಾರಿ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು.

ಗ್ರಾಮ ಪಂಚಾಯತಿ ನೀಡಿರುವ ರಸೀದಿ ಅನ್ಯ ಭಾಷೆಯಲ್ಲಿ ನೀಡಿರುವುದು ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವಲ್ಲಿನ ವೈಫಲ್ಯತೆ ಎತ್ತಿ ತೋರಿಸುತ್ತದೆ. ಕಳೆದ ಬಾರಿಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿರುವುದರಿಂದ ಕೂಡಲೇ ಪಿಡಿಓ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕನ್ನಡ ಅನುಷ್ಠಾನದಲ್ಲಿ ಯಾವುದೇ ಇಲಾಖೆ ನಿರ್ಲಕ್ಷ್ಯ ತೋರಿಸಿದರೆ ಕ್ರಮ ಕೈಗೊಳ್ಳುವಂತೆ ಕೋರಿ ಸರಕಾರಕ್ಕೆ ವರದಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸುವ ಬಗ್ಗೆ ಪ್ರತಿ ಸಭೆಯಲ್ಲೂ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಒತ್ತಾಯಿಸಿದರು.

ಅಂಗಡಿ-ಮುಂಗಟ್ಟುಗಳ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಅನ್ಯ ಭಾಷೆಗೆ ಪ್ರಾಧಾನ್ಯತೆ ನೀಡಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಬ್ಯಾಂಕುಗಳ ರಶೀದಿಯಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಇರಬೇಕು. ಅದೇ ರೀತಿ ಬ್ಯಾಂಕಿನ ಕರಾರುಪತ್ರಗಳನ್ನು ಕೂಡ ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಕ್ರಮ ವಹಿಸಬೇಕು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ರಶೀದಿ, ಕರಾರು ಪತ್ರಗಳನ್ನು ಕನ್ನಡದಲ್ಲಿ ಮುದ್ರಿಸಲು ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿ, ಒಂದು ತಿಂಗಳಿನಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ತಮ್ಮ ಕಚೇರಿಯ ಆಡಳಿತ ವೆಚ್ಚದಲ್ಲಿ ಅಳವಡಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪಎಚ್.ಬಿ., ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿಗಳಾದ ಡಾ.ಕವಿತಾ ಯೋಗಪ್ಪನವರ, ಶಿವಾನಂದ ಭಜಂತ್ರಿ, ರವಿ ಸೋಮಲಿಂಗಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News