ರಾಜಕೀಯ ನಿವೃತ್ತಿ ಪಡೆಯಲು ರಾಜೀನಾಮೆ: ಎಂಟಿಬಿ ನಾಗರಾಜ್

Update: 2019-07-12 14:50 GMT

ಬೆಂಗಳೂರು, ಜು.12: ರಾಜಕೀಯ ನಿವೃತ್ತಿ ಪಡೆಯುವ ಉದ್ದೇಶದಿಂದ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಅಂಗೀಕಾರವಾದ ಬಳಿಕ ನನ್ನ ತಾಲೂಕಿನ ಕಾರ್ಯಕರ್ತರು, ಮುಖಂಡರ ಅಭಿಪ್ರಾಯಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಶುಕ್ರವಾರ ತಮ್ಮ ಮತಕ್ಷೇತ್ರ ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಜು.17ರಂದು ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನನಗೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್‌ಗೆ ಸಮಯ ನಿಗದಿ ಮಾಡಿದ್ದಾರೆ. ಅಲ್ಲಿಗೆ ಹೋಗಿ, ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತೇವೆ ಎಂದರು.

ಆನಂತರ, ಸ್ಪೀಕರ್ ಕೈಗೊಳ್ಳುವ ನಿರ್ಧಾರವನ್ನು ಕಾದು ನೋಡುತ್ತೇವೆ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಈ ನಿರ್ಣಯ ಕೈಗೊಂಡಿದ್ದೇವೆ. ನಮ್ಮ ರಾಜೀನಾಮೆ ಅಂಗೀಕಾರ ಅಂಗೀಕಾರವಾಗಿದೆ ಎಂದು ಸ್ಪೀಕರ್ ಹೇಳಿದ ಬಳಿಕ ನಾನು ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದರು.

ನಾನು ಬಿಜೆಪಿಗೆ ಹೋದರೆ ಅವರ(ಸಂಸದ ಬಿ.ಎನ್.ಬಚ್ಚೇಗೌಡ) ತಕರಾರಿಲ್ಲ ಎಂದು ಹೇಳಿಕೆ ನೀಡಿರುವುದು ಕೆಲವು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ತಕರಾರು ಬಂದಿರುವುದು ಕಾಂಗ್ರೆಸ್‌ನವರದ್ದು. ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ನಾಗರಾಜ್ ತಿಳಿಸಿದರು.

ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದು ನಿಜ. ಆದರೆ, ಸಮಯ, ಸಾಂದರ್ಭಿಕವಾಗಿ ಒದಗಿ ಬಂದಾಗ, ಅದರ ಅನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಹಜ. ನಮ್ಮ ತಾಲೂಕು ಹಾಗೂ ಕಾರ್ಯಕರ್ತರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ನನ್ನ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News