ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ: ಡಿ.ಕೆ.ಶಿವಕುಮಾರ್

Update: 2019-07-12 15:17 GMT

ಬೆಂಗಳೂರು, ಜು. 12: ‘ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶದಿಂದ ಬದುಕದಿದ್ದರೆ ಬದುಕಿಗೇ ಅವಮಾನ. ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಈ ಭೂಮಿನೂ ನಮ್ಮದಲ್ಲ, ಪ್ರಕೃತಿಯೂ ನಮ್ಮದಲ್ಲ. ನಮ್ಮದು ಅಂತಾ ನಮ್ಮ ಜತೆಗಿರೋದು ನಮ್ಮ ಬದುಕಿನ ಸ್ನೇಹ ಮಾತ್ರ’
ಹೀಗೆಂದು ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಅಕ್ಷರಶಃ ಕಾವ್ಯದ ದಾಟಿಯಲ್ಲೆ ತಮ್ಮ ಮಾತು ಆರಂಭಿಸಿದ ಸಚಿವ ಡಿ.ಕೆ.ಶಿವಕುಮಾರ್, ನಾನು ಬಹಳ ದುಃಖದಿಂದ ನನ್ನ ಆತ್ಮೀಯ ಸ್ನೇಹಿತ ಶಿವಳ್ಳಿಗೆ ಸಂತಾಪ ಸೂಚಿಸಬೇಕಾಗಿದೆ. ಬಂಗಾರಪ್ಪನವರು ನನಗೆ ಆತನನ್ನು ಪರಿಚಯ ಮಾಡಿಕೊಟ್ಟರು ಎಂದರು

ಹಿರಿಯರು ಒಂದು ಮಾತು ಹೇಳ್ತಾರೆ. ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ.. ಜಾಗ್ರತ... ಮನಸ್ಸು, ಹಣ, ಯೌವನ, ಅಧಿಕಾರ ಯಾವುದೂ ಶಾಶ್ವತ ಅಲ್ಲ ಎಂದ ಅವರು, ಶಿವಳ್ಳಿ ನನಗೆ ತಮ್ಮನಿದ್ದಂತೆ. ಅವನ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಶಿವಳ್ಳಿ ಬಡವ. ಸಣ್ಣ ಕೃಷಿಕ, ಸಣ್ಣ 30x40 ಅಗಲದ ಜೋಪಡಿಯಲ್ಲಿದ್ದ. ಆದರೂ, ಯಾರಾದರೂ ಸಹಾಯ ಕೇಳಿ ಬಂದರೆ ತನ್ನ ಬಳಿ ಇದ್ದದ್ದನ್ನು ತನಗೆ, ತನ್ನ ಕುಟುಂಬದ ಬಗ್ಗೆ ಯೋಚಿಸದೆ ದಾನ ಮಾಡುತ್ತಿದ್ದ ಎಂದು ಸ್ಮರಿಸಿದರು.

ಶಿವಳ್ಳಿ ಒಂದು ದಿನ ನಾನು ಊರಿಗೆ ಹೋಗುತ್ತಿದ್ದೇನೆ. ನಿಮ್ಮನ್ನು ನೋಡಲೇಬೇಕು ಅಂತಾ ತನ್ನ ಆಪ್ತ ಸಹಾಯಕ ಹಾಗೂ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ನನ್ನ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ನಂತರ ಬೆಳಗ್ಗೆ ನಾನು ದೇವಸ್ಥಾನಕ್ಕೆ ಹೋಗುವಾಗ ಶಿವಳ್ಳಿ ಅಸ್ವಸ್ಥರಾಗಿದ್ದಾರೆಂಬ ಸುದ್ದಿ ಬಂತು. ನಾನು ತಕ್ಷಣ ವೈದ್ಯರಿಗೆ ಕರೆ ಮಾಡಿ ವಿಚಾರಿಸಿದೆ. ಅವರು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದರು. ಆದರೆ, ಐದೆ ನಿಮಿಷದಲ್ಲಿ ಶಿವಳ್ಳಿ ಇಲ್ಲ ಅಂತಾ ಸುದ್ದಿ ಬಂತು.
ಇವತ್ತು ಆತ ನಮ್ಮೊಂದಿಗೆ ಇಲ್ಲ. ಅವನ ಹೆಣ ಹೊರುವ ಭಾಗ್ಯ ನನಗೆ ಸಿಗಲಿಲ್ಲ. ಆದರೆ ಅವನ ಜೀವನದ ಪಲ್ಲಕ್ಕಿಯಲ್ಲಿ ನಾನು ಸಣ್ಣ ಹೂವಿನ ಹಾರದ ಭಾಗವಾಗಲು ನನಗೆ ಭಗವಂತ ಅವಕಾಶ ಮಾಡಿಕೊಟ್ಟ. ದೇವರು ವಜ್ರಕ್ಕೆ ಹೊಳಪು ಕೊಟ್ಟ. ಆದರೆ ಸುವಾಸನೆ ಕೊಡಲಿಲ್ಲ. ಆದರೆ ಮೃದುವಾದ ನಮ್ಮ ಮಲ್ಲಿಗೆ ಹೂವಿಗೆ ಸುಗಂಧ ಪರಿಮಳ ಕೊಟ್ಟ, ಆದರೆ ಅದಕ್ಕೆ ಹೆಚ್ಚಿನ ಆಯಸ್ಸು ಕೊಡಲಿಲ್ಲ. ಅದೇ ರೀತಿ ಶ್ರಮಜೀವಿಗಳಿಗೆ, ಶಿವಳ್ಳಿಗೆ ಕಡಿಮೆ ಆಯಸ್ಸು ಕೊಟ್ಟರು, ಅವನು ಮಾಡಿದ ಕೆಲಸ ಮಾತ್ರ ಅಲ್ಲಿನ ವಿಪಕ್ಷಗಳ ನಾಯಕರುಗಳು ಹಾಡಿ-ಹೊಗಳುವಂತೆ ಮಾಡಿದೆ.
ನನಗೆ ಆರೋಗ್ಯ ಸರಿ ಇರಲಿಲ್ಲ. ಆದರೂ ನಮ್ಮ ಪಕ್ಷದ ನಾಯಕರುಗಳು ಉಪಚುನಾವಣೆ ಜವಾಬ್ದಾರಿ ಕೊಟ್ಟರು. ಆಗಷ್ಟೇ ಲೋಕಸಭೆ ಚುನಾವಣೆ ಮುಗಿದಿತ್ತು. ನಾನು ಸುಮಾರು 26ದಿನ ಅಲ್ಲೇ ಇದ್ದೆ. ನನ್ನ ಸ್ನೇಹಿತನ ಭಾವನೆ ಪ್ರೀತಿ ನನ್ನನ್ನು ಅಲ್ಲಿಗೆ ಸೆಳೆಯುತ್ತಿತ್ತು ಎಂದರು.

ನಾನು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಆಗ ಶಿವಳ್ಳಿ ನೆನೆದು ಭಾವುಕನಾದೆ. ಬೇರೆ ಎಂತಹುದೇ ಸಂದರ್ಭದಲ್ಲಿ ನಾನು ಹೆದರಿದವನಲ್ಲ. ನಾನು ಅಳುವುದು ಕಡಿಮೆ. ಪ್ರೀತಿ, ಸ್ನೇಹಕ್ಕೆ ಭಾವುಕನಾದೆ. ನಾನು ಭಾವುಕನಾದದನ್ನು ನಮ್ಮ ರಾಜಕೀಯ ಸ್ನೇಹಿತರು ಟೀಕೆ ಟಿಪ್ಪಣಿ ಮಾಡಿದರು. ಅವರ ಮಾತಿನಿಂದ ಅವರಿಗೆ ಒಳ್ಳೆಯದಾಗೋದಾದ್ರೆ ಆಗಲಿ. ಆದರೆ ಚುನಾವಣೆಯಲ್ಲಿ ಜನ ತೋರಿಸಿದ ಪ್ರೀತಿ ಇದೆಯಲ್ಲಾ ಅದು ಮುಖ್ಯ. ಲೋಕಸಭೆ ಚುನಾವಣೆಯಲ್ಲಿ 20 ಸಾವಿರ ಲೀಡ್ ಅಲ್ಲಿ ಅಭ್ಯರ್ಥಿ ಗೆಲ್ತಾರೆ. ಶಿವಳ್ಳಿ ಮಾಡಿದ ಬಡ ಜನರ ಸೇವೆಗೆ ಪಕ್ಷ, ಧರ್ಮ, ಜಾತಿ ಬಿಟ್ಟು, ನಾನು ಹೊತ್ತ ಪಲ್ಲಕ್ಕಿಗೆ ಬಡವರು ಆಶೀರ್ವಾದ ಮಾಡಿ 20ಸಾವಿರ ಮತಗಳ ಮುನ್ನಡೆಯಲ್ಲಿ ನನ್ನ ಸೋದರಿಯನ್ನು ವಿಧಾನಸಭೆಗೆ ಕಳುಹಿಸಿ ಕೊಟ್ಟಿದ್ದಾರೆ. ಅದರಲ್ಲಿ ನನ್ನದೂ ಅಳಿಲು ಸೇವೆ ಇದೆ ಎಂಬ ತೃಪ್ತಿ ಇದೆ.
ಮಗು ಹುಟ್ಟಿದಾಗ ಅದು ಅಳುತ್ತದೆ. ಆದರೆ ಸಮಾಜ ಖುಷಿಯಾಗುತ್ತದೆ. ಅದೇ ವ್ಯಕ್ತಿ ಸತ್ತಾಗ ಆತನ ಸೇವೆಯಿಂದ ಆತ ಸಂತೋಷವಾಗಿರುತ್ತಾನೆ. ಇಡೀ ಸಮಾಜ ಅಳುತ್ತದೆ. ಅದೇ ರೀತಿ ಶಿವಳ್ಳಿಯನ್ನು ನಾವು ಸ್ಮರಿಸಿಕೊಂಡು ಭಾವುಕರಾಗುತ್ತಿದ್ದೇವೆ. ಶಿವಳ್ಳಿ ಬಗ್ಗೆ ಮಾತನಾಡುವುದು ಇನ್ನು ಸಾಕಷ್ಟು ವಿಷಯವಿದೆ. ಆದರೆ ನನಗೆ ಸಮಯ ಕಡಿಮೆ ಇರುವುದರಿಂದ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ.

‘ನನಗೆ ಸಂಸ್ಕೃತಿ ಇಲಾಖೆ ಜವಾಬ್ದಾರಿ ಸಿಕ್ಕ ಮೇಲೆ ವಿಧಿ ಇಲ್ಲದೆ ಕೆಲವರಿಗೆ ಅಂತಿಮ ಗೌರವ ಸಲ್ಲಿಸಬೇಕಾಯಿತು. ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ. ಇಲಾಖೆ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದ್ದೆವು. ಆದರೆ ಅವರ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಸರಳವಾಗಿ ನಡೆಸಬೇಕಾಯಿತು.
-ಸಚಿವ ಡಿ.ಕೆ.ಶಿವಕುಮಾರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News