ಪಕ್ಕದ ರಾಜ್ಯದ ನೀತಿಯ ಅಂಶಗಳು ಇಲ್ಲಿಯೂ ಜಾರಿಗೊಳಿಸಿ: ಹೈಕೋರ್ಟ್

Update: 2019-07-12 17:34 GMT

ಬೆಂಗಳೂರು, ಜು.12: ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಜಾನುವಾರುಗಳಿಗೆ ಆಹಾರ ಒದಗಿಸಲು ಜಾರಿಗೆ ತಂದಿರುವ ನೀತಿಯನ್ನು ಇಲ್ಲಿಯೂ ಅಳವಡಿಸಿಕೊಂಡು ಜಾನುವಾರು ಶಿಬಿರಗಳನ್ನು ಮುಚ್ಚದಂತೆ ಕ್ರಮವಹಿಸಿ. ಇಲ್ಲದಿದ್ದರೆ ನ್ಯಾಯಪೀಠವೇ ಮಧ್ಯಪ್ರವೇಶಿಸಿ ಸೂಕ್ತ ಆದೇಶ ನೀಡಲಿದೆ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಈ ಕುರಿತು ರಾಜ್ಯ ಕಾನೂನು ಸೇವೆಗಳ ಸಮಿತಿ, ತುಮಕೂರು ಮೂಲದ ಎ.ಮಲ್ಲಿಕಾರ್ಜುನ್ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಕರ್ನಾಟಕ ರಾಜ್ಯದ ಬರಗಾಲ ಪೀಡಿತ ತಾಲೂಕುಗಳಲ್ಲಿ ಜಾನುವಾರುವೊಂದಕ್ಕೆ 5 ಕೆಜಿ ಮೇವು ನೀಡಲಾಗುತ್ತಿದೆ. ಆದರೆ, ಇದಕ್ಕಾಗಿಯೇ ಯಾವುದೇ ನೀತಿಯನ್ನು ಜಾರಿಗೆ ತಂದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಕಂದಾಯ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್ ಹಾಗೂ ಪಶುಸಂಗೋಪನೆ ಇಲಾಖೆಯ ರಾಜಕುಮಾರ್ ಖತ್ರಿ ಅವರು ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಿದ್ದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಬೇರೆ ರಾಜ್ಯಗಳಲ್ಲಿ ಜಾನುವಾರುಗಳಿಗೆ 5 ಕೆಜಿಗಿಂತಲೂ ಹೆಚ್ಚು ಮೇವು ಒದಗಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಬರೀ 5 ಕೆಜಿ ಒದಗಿಸಲಾಗುತ್ತಿದೆ. ಇದು ಅವೈಜ್ಞಾನಿಕ ಕ್ರಮವಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News