ರಾಜೀನಾಮೆ ಅಂಗೀಕರಿಸುವುದು ಅನುಮಾನ: ಬಸವರಾಜ ರಾಯರೆಡ್ಡಿ

Update: 2019-07-12 17:44 GMT

ಹುಬ್ಬಳ್ಳಿ, ಜು.12: ಸಮ್ಮಿಶ್ರ ಸರಕಾರದ ವಿರುದ್ಧ ಮುನಿಸಿಕೊಂಡು ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸುವುದು ಅಸಾಧ್ಯ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ನಾಯಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವಂಹತ ಶಾಸಕರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆಂದು ಸ್ಪೀಕರ್ ಬಳಿ ಹೇಳಬೇಕಿದೆ. ಆದರೆ, ಅತೃಪ್ತ ಶಾಸಕರು ಈಗ ನೀಡಿರುವ ಕಾರಣಗಳು ಸೂಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಪೀಕರ್ ರಾಜೀನಾಮೆಗಳನ್ನು ತಿರಸ್ಕಾರ ಮಾಡಲಿದ್ದಾರೆ ಎಂದು ನುಡಿದರು.

ಸಂವಿಧಾನಬದ್ಧವಾಗಿಯೇ ಸ್ಪೀಕರ್ ರಾಜೀನಾಮೆಗಳನ್ನು ಅಂಗೀಕರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜೀನಾಮೆಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ಸಂಪೂರ್ಣವಾಗಿ ತನ್ನ ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ. ಅಲ್ಲದೆ, ರಾಜೀನಾಮೆ ನೀಡಿರುವ ಶಾಸಕರು ಸೇರಿದಂತೆ ಎಲ್ಲರಿಗೂ ಕಡ್ಡಾಯವಾಗಿ ಸದನಕ್ಕೆ ಹಾಜರಾಗಲು ಪಕ್ಷ ವಿಪ್ ಜಾರಿಗೆ ಮಾಡಿದೆ ಎಂದರು.

ಈ ಹಿನ್ನೆಲೆಯಲ್ಲಿ ಪಕ್ಷದ ಆದೇಶ ಪಾಲಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಸದನಕ್ಕೆ ಆಗಮಿಸಬೇಕಿದೆ. ಇಲ್ಲದಿದ್ದರೆ, ಶಾಸಕರನ್ನು ಪಕ್ಷದಿಂದ ಅನರ್ಹತೆಗೊಳಿಸುವ ಸಾಧ್ಯತೆಗಳಿವೆ. ಒಂದು ವೇಳೆ ಪಕ್ಷದ ಶಾಸಕರು ಬಾರದಿದ್ದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಪಕ್ಷ ಚಿಂತನೆ ನಡೆಸಿದೆ. ಹೀಗಾಗಿ, ಎಲ್ಲ ಅತೃಪ್ತರು ಗೌರವಯುತವಾಗಿ ಹಿಂದಿರುಗಬೇಕೆಂದು ಆಗ್ರಹಿಸಿದರು.

ಬಿಜೆಪಿಯ ಆಪರೇಷನ್ ಕಮಲದಿಂದಲೇ ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ವಾಮ ಮಾರ್ಗಗಳಿಂದ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಮೈತ್ರಿ ಸರಕಾರದ ಶಾಸಕರನ್ನು ಸೆಳೆದು, ಸರಕಾರವನ್ನು ಅಸ್ಥಿರಗೊಳಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಯರೆಡ್ಡಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News