ಅಗಲಿದ ಶಾಸಕರಿಗೆ ಉಭಯ ಸದನಗಳಲ್ಲೂ ಶ್ರದ್ಧಾಂಜಲಿಗೆ ಒಮ್ಮತ

Update: 2019-07-12 17:45 GMT

ಬೆಂಗಳೂರು, ಜು.12: ವಿಧಾನಸಭೆ ಹಾಗೂ ವಿಧಾನಪರಿಷತ್ ಶಾಸಕರ ಅಗಲಿಕೆಯ ಕುರಿತು ಉಭಯ ಸಧನಗಳೆರಡಲ್ಲೂ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ವಿಧಾನಪರಿಷತ್‌ನಲ್ಲಿ ಸರ್ವಾನುಮತದಿಂದ ಒಮ್ಮತಕ್ಕೆ ಬರಲಾಯಿತು.

ವಿವಿಧ ಕ್ಷೇತ್ರದ ಗಣ್ಯರನ್ನು ಹೊರತುಪಡಿಸಿ ಸಚಿವರೊಬ್ಬರು ಅಗಲಿದಾಗ ಮಾತ್ರ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಉಳಿದಂತೆ ವಿಧಾನಸಭೆಯ ಶಾಸಕರು ಅಗಲಿದರೆ ಕೇವಲ ವಿಧಾನಸಭೆಯಲ್ಲಿ ಮಾತ್ರ ಶ್ರದ್ಧಾಂಜಲ್ಲಿ ಸಲ್ಲಿಸಲಾಗುತ್ತದೆ. ವಿಧಾನಪರಿಷತ್‌ನಲ್ಲಿ ಸಲ್ಲಿಸಲಾಗುತ್ತಿರಲಿಲ್ಲ. ಹಾಗೆಯೆ ವಿಧಾನಪರಿಷತ್‌ನ ಸದಸ್ಯರು ಅಗಲಿದರೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಆಗುವುದಿಲ್ಲ.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಇತ್ತೀಚೆಗಷ್ಟೆ ಅಗಲಿದ ಗಣ್ಯರಿಗೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಂತಾಸ ಸೂಚಿಸಿ ಅವರ ಕುರಿತು ಮಾತನಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ರವಿ, ಮಾಜಿ ಶಾಸಕ ಶಿವಲಿಂಗೇಗೌಡರು ನಿಧನದ ಸುದ್ದಿಯನ್ನು ಪ್ರಸ್ತಾಪಿಸಿದರು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ, ಶಾಸಕರಿಗೆ ರಾಜ್ಯದ ಏಳಿಗೆಗೆ ಅವಿರತವಾಗಿ ಶ್ರಮಿಸಿದ್ದಾರೆ. ಹೀಗಾಗಿ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಇಲ್ಲಿಯವರೆಗೂ ವಿಧಾನಸಭೆಯ ಶಾಸಕರ ಅಗಲಿಕೆ ಶ್ರದ್ಧಾಂಜಲಿಯನ್ನು ವಿಧಾನಪರಿಷತ್‌ನಲ್ಲಿ ಮಾಡಿಲ್ಲ. ಈ ಕುರಿತು ಸಭಾಧ್ಯಕ್ಷರ ಬಳಿ ಮಾತನಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ವಪಕ್ಷ ಸದಸ್ಯರು, ಈ ಅಧಿವೇಶನದಿಂದಲೆ ವಿಧಾನಸಭೆ ಶಾಸಕರ ಅಗಲಿಕೆಯ ಶ್ರದ್ಧಾಂಜಲಿ ನಡೆಯಲಿ ಎಂದು ಪಟ್ಟು ಹಿಡಿದರು. ಪರಿಷತ್‌ನ ಎಲ್ಲ ಸದಸ್ಯರ ಒಮ್ಮತಕ್ಕೆ ಸಮ್ಮತಿ ಸೂಚಿಸಿದ ಸಭಾಪತಿಗಳು, ವಿಧಾನಸಭೆಯ ಶಾಸಕರ ಅಗಲಿಕೆಯ ಶ್ರದ್ಧಾಂಜಲಿ ಸಲ್ಲಿಸಿದರು.

ವಿಧಾನಸಭೆ ಶಾಸಕರ ಅಗಲಿಕೆ ಕುರಿತು ವಿಧಾನಪರಿಷತ್‌ನಲ್ಲೂ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಒಳ್ಳೆಯ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ. ಇದೇ ಮಾದರಿಯಲ್ಲಿ ವಿಧಾನಪರಿಷತ್‌ನ ಅಗಲಿದ ಸದಸ್ಯರಿಗೆ ಕೆಳ ಮನೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವಂತೆ ಸಭಾಧ್ಯಕ್ಷ ರಮೇಶ್‌ಕುಮಾರ್ ಜೊತೆ ಮಾತನಾಡಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು.
-ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ, ವಿಧಾನಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News