ಕೆಂಪೇಗೌಡ ಜಯಂತಿ ಮುಂದೂಡುವ ಸಾಧ್ಯತೆ

Update: 2019-07-12 17:48 GMT

ಬೆಂಗಳೂರು, ಜು.12: ರಾಜ್ಯ ರಾಜಕೀಯ ಅಸ್ಥಿರತೆ ಬಿಬಿಎಂಪಿ ಆಡಳಿತ ಮತ್ತು ಕಾರ್ಯಕ್ರಮಗಳ ಮೆಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಮಾಸಾಂತ್ಯದಲ್ಲಿ ನಡೆಯಬೇಕಿದ್ದ ಕೆಂಪೇಗೌಡ ಜಯಂತಿಯನ್ನು ಆಗಸ್ಟ್‌ಗೆ ಮುಂದೂಡುವ ಸಾಧ್ಯತೆಯಿದೆ.

ಈ ಬಾರಿ ಕೆಂಪೇಗೌಡ ಜಯಂತಿ ಆಚರಣೆಯೆ ಅನುಮಾನ ಎನ್ನುವಂತಾಗಿದೆ. ಪ್ರತಿ ವರ್ಷ ಬೆಂಗಳೂರು ಕರಗ ಸಂದರ್ಭದಲ್ಲಿಯೇ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿತ್ತು. ಈ ಬಾರಿ ಕರಗ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಇದ್ದ ಕಾರಣದಿಂದ ಆಚರಿಸಿರಲಿಲ್ಲ. ಇದೀಗ ಚುನಾವಣೆ ಮುಗಿದಿದ್ದು, ಮಾಸಾಂತ್ಯದಲ್ಲಿ ಕೆಂಪೇಗೌಡ ಜಯಂತಿ ನಡೆಸುವುದಾಗಿ ಮೇಯರ್ ಗಂಗಾಂಬಿಕೆ ಘೊಷಿಸಿದ್ದರು. ಆದರೆ, ಈಗಿನ ರಾಜಕೀಯ ಬೆಳವಣಿಗೆಗಳಿಂದ ದಿನಾಂಕ ಘೊಷಣೆಗೆ ಹಿಂದೇಟು ಹಾಕುವಂತಾಗಿದೆ.

ಕೆಂಪೇಗೌಡ ಜಯಂತಿ ಆಚರಣೆ ಕುರಿತಂತೆ ಪ್ರತಿ ವರ್ಷ ಮೇಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ. ಈ ವರ್ಷವೂ ಸಮಿತಿ ರಚಿಸಲಾಗಿದ್ದು, ಈವರೆಗೆ 1 ಬಾರಿಯಷ್ಟೆ ಸಭೆ ನಡೆಸಲಾಗಿದೆ. ಹೀಗಾಗಿ ಜಯಂತಿಗೆ ಯಾವುದೇ ಸಿದ್ಧತೆಗಳು ನಡೆದಿಲ್ಲ.

ಪ್ರಶಸ್ತಿ ಪುರಸ್ಕೃತರನ್ನು ಆರಿಸಿಲ್ಲ: ಬೆಂಗಳೂರಿನ ಏಳಿಗೆಗಾಗಿ ಶ್ರಮಿಸಿದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಆದರೆ, ಈವರೆಗೆ ಸಮಿತಿ ರಚನೆಯಾಗಿಲ್ಲ. ಪ್ರಸ್ತುತ ಸ್ಥಿತಿಯಲ್ಲಿ ಸಿಎಂ ಜಯಂತಿಗೆ ಸಮಯ ನೀಡುವುದು ಅನುಮಾನ ಎನ್ನುವಂತಾಗಿದೆ. ಹೀಗಾಗಿ ಬಿಬಿಎಂಪಿ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News