ಕನ್ಸರ್‍ವೆನ್ಸಿಗಳಲ್ಲಿ ಮಾರುಕಟ್ಟೆ, ಪಾರ್ಕಿಂಗ್ ಸ್ಥಳ ಅಭಿವೃದ್ದಿಗೆ ಹೈಕೋರ್ಟ್ ವಿಭಾಗೀಯ ಪೀಠದಿಂದ ತಡೆಯಾಜ್ಞೆ

Update: 2019-07-12 18:11 GMT

ಶಿವಮೊಗ್ಗ, ಜು. 12: ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆ ಆಡಳಿತ ನಡೆಸುತ್ತಿರುವ ಕನ್ಸರ್‍ವೆನ್ಸಿಗಳ ಅಭಿವೃದ್ದಿ ಕಾರ್ಯ ತಡೆಗೆ ಹೈಕೋರ್ಟ್‍ನ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಶಿವಮೊಗ್ಗ ನಗರದ ಕನ್ಸರ್‍ವೆನ್ಸಿಗಳಲ್ಲಿ ಮಾರುಕಟ್ಟೆ, ವಾಹನ ನಿಲುಗಡೆಯ ಪಾರ್ಕಿಂಗ್ ತಾಣವಾಗಿ ಅಭಿವೃದ್ದಿಗೊಳಿಸುವ ಕಾರ್ಯ ಕಾನೂನುಬದ್ದವಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮೂರು ವಾರಗಳಲ್ಲಿ ವರದಿ ನೀಡುವಂತೆ ಇದೇ ವೇಳೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶ ಹೊರಡಿಸಿದೆ. 

ಪರಿಶೀಲನೆ ನಡೆಸುವವರೆಗೆ ಕನ್ಸರ್‍ವೆನ್ಸಿಗಳಲ್ಲಿ ಸದ್ಯ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳಬಾರದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ. 

ಮೇಲ್ಮನವಿ: ಕನ್ಸರ್‍ವೆನ್ಸಿಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ನಂಜಪ್ಪ ಸೇರಿದಂತೆ 9 ಜನ ವ್ಯಾಪಾರಿಗಳು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕನ್ಸರ್‍ವೆನ್ಸಿಗಳನ್ನು ವಾಹನ ನಿಲುಗಡೆ ಹಾಗೂ ಮಾರುಕಟ್ಟೆ ಸ್ಥಳವಾಗಿ ಪರಿವರ್ತನೆ ಕಾರ್ಯ ಕಾನೂನುಬದ್ದವಾಗಿದೆಯೇ ಎಂಬುವುದರ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಅಭಿವೃದ್ದಿ: ನಗರದ ಕೆಲ ಮುಖ್ಯ ರಸ್ತೆಗಳಲ್ಲಿದ್ದ ಕನ್ಸರ್‍ವೆನ್ಸಿಗಳು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದ್ದವು. ಕೆಲವೆಡೆ ಕೊಳಚೆ ಗುಂಡಿಗಳಾಗಿ, ಮಲಮೂತ್ರ ವಿಸರ್ಜನೆ ತಾಣಗಳಾಗಿದ್ದವು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್‍ರವರು ಕನ್ಸರ್‍ವೆನ್ಸಿಗಳ ಸುಧಾರಣೆಗೆ ಯೋಜನೆಯೊಂದನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದರು. 

ಕನ್ಸರ್‍ವೆನ್ಸಿಗಳನ್ನು ಅಭಿವೃದ್ದಿಗೊಳಿಸಿ ವಾಹನ ನಿಲುಗಡೆ ಹಾಗೂ ರಸ್ತೆ ಬದಿ ವ್ಯಾಪಾರ ನಡೆಸುವ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದರು. ಅದರಂತೆ ನಗರದ ಹಲವೆಡೆ ಕನ್ಸರ್‍ವೆನ್ಸಿಗಳನ್ನು ಅಭಿವೃದ್ದಿಗೊಳಿಸಲಾಗಿತ್ತು. ಪ್ರಸ್ತುತ ಮಹಾನಗರ ಪಾಲಿಕೆ ಆಡಳಿತ ನಗರದ ವಿವಿಧ ಬಡಾವಣೆಗಳಲ್ಲಿನ ಕನ್ಸರ್‍ವೆನ್ಸಿಗಳ ಅಭಿವೃದ್ದಿಗೆ ಕ್ರಮಕೈಗೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News