ಅಫ್ಘಾನಿಸ್ತಾನದ ನಾಯಕನಾಗಿ ರಶೀದ್ ಖಾನ್ ಆಯ್ಕೆ

Update: 2019-07-12 19:10 GMT

ಕಾಬೂಲ್, ಜು.12: ಅಫ್ಘಾನಿಸ್ತಾನದ ಸ್ಟಾರ್ ಲೆಗ್-ಸ್ಪಿನ್ನರ್ ರಶೀದ್ ಖಾನ್ ಎಲ್ಲ ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಶುಕ್ರವಾರ ನೇಮಕಗೊಂಡಿದ್ದಾರೆ.

 ವಿಶ್ವಕಪ್ ಆರಂಭಕ್ಕೆ ಮೊದಲೇ ಅಸ್ಘರ್ ಅಫ್ಘಾನ್‌ರನ್ನು ನಾಯಕ ಸ್ಥಾನದಿಂದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ಉಚ್ಚಾಟಿಸಿತ್ತು. ಗುಲ್ಬದ್ದೀನ್ ನೈಬ್(ಏಕದಿನ), ರಶೀದ್(ಟಿ-20) ಹಾಗೂ ರಹ್ಮತ್ ಶಾ(ಟೆಸ್ಟ್)ರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ರಶೀದ್ ಉಪ ನಾಯಕರಾಗಿ ಆಯ್ಕೆಯಾಗಿದ್ದರು.

ವಿಶ್ವಕಪ್‌ಗೆ ಮೊದಲು ತಂಡದ ಯಶಸ್ವಿ ನಾಯಕ ಅಫ್ಘಾನ್‌ರನ್ನು ಉಚ್ಚಾಟಿಸಿರುವ ಬಗ್ಗೆ ಎಸಿಬಿ ತೀವ್ರ ಟೀಕೆ ಎದುರಿಸಿತ್ತು. ಇದೀಗ ಎಸಿಬಿ ಮತ್ತೊಮ್ಮೆ ಆಮೂಲಾಗ್ರ ಬದಲಾವಣೆ ಮಾಡಿದ್ದು, ಎಲ್ಲ ಮಾದರಿಯ ಕ್ರಿಕೆಟ್‌ಗೆ ಲೆಗ್ ಸ್ಪಿನ್ನರ್ ರಶೀದ್‌ರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿದೆ.

2019ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಭಾರೀ ವೈಫಲ್ಯ ಅನುಭವಿಸಿದ್ದು, ಆಡಿರುವ ಎಲ್ಲ 9 ಪಂದ್ಯಗಳಲ್ಲಿ ಸೋತಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ರಶೀದ್ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯವ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನ್ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಲಿದ್ದಾರೆ. ನ.5 ರಿಂದ ಡಿ.1ರ ತನಕ ಸ್ವದೇಶದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 3 ಟಿ-20, 3 ಏಕದಿನ ಹಾಗೂ 1 ಟೆಸ್ಟ್ ಪಂದ್ಯವನ್ನು ಆಡಲಿರುವ ಅಫ್ಘಾನ್ ಇದಕ್ಕೂ ಮೊದಲು ಬಾಂಗ್ಲಾದೇಶ ಹಾಗೂ ಝಿಂಬಾಬ್ವೆ ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News