ಭಾಷಾಂತರ ಸುಲಭದ ಕೆಲಸವಲ್ಲ : ವಿಮರ್ಶಕ ಎಂ.ಬಿ.ಹೆಗಡೆ

Update: 2019-07-13 11:23 GMT

ಶಿವಮೊಗ್ಗ, ಜು.13: ಭಾಷಾಂತರ ಸುಲಭದ ಕೆಲಸವಲ್ಲ. ಭಾಷಾಂತರ ನಡೆಸುವಾಗ ಮೂಲ ಭಾಷೆಗೆ ಚ್ಯುತಿ ಬರದಂತೆ, ಅಭಾಸಕ್ಕೆ ಅವಕಾಶವಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಭಾಷಾಂತರಕಾರ ಸೂಕ್ಷ್ಮಗ್ರಾಹಿಯಾಗಿರಬೇಕಾಗುತ್ತದೆ ಎಂದು ವಿಮರ್ಶಕ ಎಂ.ಜಿ.ಹೆಗಡೆ ತಿಳಿಸಿದ್ದಾರೆ. 

ನಗರದ ಕಟೀಲು ಅಶೋಕ ಪೈ ಮೆಮೋರಿಯಲ್ ಸಂಸ್ಥೆಯ ಸಭಾಂಗಣದಲ್ಲಿ ಕುವೆಂಪು ಭಾಷಾ ಭಾರತಿ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಐದು ದಿನಗಳ ಭಾಷಾಂತರ ಕಾರ್ಯಾಗಾರ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. 

ಭಾಷಾಂತರಕಾರನಿಗೆ ಕೌಶಲ್ಯಗಳು ಅಗತ್ಯವಾಗಿರುತ್ತವೆ. ಆ ನಿಟ್ಟಿನಲ್ಲಿ ಅವರು ಹೆಚ್ಚಿನ ಅಧ್ಯಯನ ಅಗತ್ಯವಾಗಿರುತ್ತದೆ. ಭಾಷಾಂತರಗೊಳಿಸಬೇಕಾದ ಸಾಹಿತ್ಯದ ಭಾಷೆಯ ಮೇಲೆ ತನ್ನ ಮಾತೃಭಾಷೆಯಷ್ಟೆ ಹಿಡಿತವಿರಬೇಕಾಗುತ್ತದೆ. ಪದಾರ್ಥಗಳ ಅರ್ಥ ವೈಶಾಲ್ಯತೆ ಅರಿತುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.  

ಹಾಗೆಯೇ ಮೂಲ ಭಾಷೆಯ ಸಾಂಸ್ಕೃತಿಕ ಮತ್ತು ಭೌಗೋಳಿಕ ವಿಷಯಕ್ಕೆ ಯಾವುದೇ ರೀತಿಯ ಕುಂದುಂಟಾಗದ ರೀತಿಯಲ್ಲಿ ಭಾಷಾಂತರ ಪ್ರಕ್ರಿಯೆ ಮಾಡಬೇಕು. ಅನುವಾದಕನಿಗೆ ಈ ಪ್ರಜ್ಞೆ ಅತ್ಯಂತ ಮಹತ್ವದ್ದಾಗಿದೆ ಬೇಕಾಗುತ್ತದೆ. ಈ ಕಾರಣದಿಂದಲೇ ಭಾಷಾಂತರಗೊಳಿಸಲು ನಿರ್ಧರಿಸಿರುವ ಸಾಹಿತ್ಯದ ಸಮಗ್ರ ಅಧ್ಯಯನ ಮಾಡಿರಬೇಕಾಗಿರುತ್ತದೆ ಎಂದು ತಿಳಿಸಿದರು. 

ಭಾಷಾಂತರ ಸಂದರ್ಭದಲ್ಲಿ ನಮ್ಮ ಭಾಷೆಯನ್ನು ಕೂಡ ಶ್ರೀಮಂತಗೊಳಿಸಬೇಕು. ಅನುವಾದ ಕ್ಷೇತ್ರ ಅತ್ಯಂತ ವಿಶಾಲ, ವಿಸ್ತಾರವಾದುದು. ಈ ಕ್ಷೇತ್ರಕ್ಕೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸುವಂತಹ ಶಕ್ತಿಯಿದೆ. ಆದರೆ ನಮ್ಮ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುತ್ತಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಕಳೆದ 2005 ರಲ್ಲಿ ಅಂದಿಕ ಕೇಂದ್ರ ಸರ್ಕಾರ ಭಾಷಾಂತರಕ್ಕೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ, ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಆದರೆ ಆ ಸಮಿತಿಯ ವರದಿ ಇದುವರೆಗೂ ಕೂಡ ಕಾರ್ಯಗತಗೊಂಡಿಲ್ಲ. ಕುವೆಂಪು ಭಾಷಾ ಭಾರತಿ ವಿವಿಧ ಕ್ಷೇತ್ರಗಳಲ್ಲಿ ಸಾಹಿತ್ಯ ಅಧ್ಯಯನ ವಸ್ತುಗಳನ್ನು ಅನುವಾದ ಮಾಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೈದ್ರಾಬಾದ್‍ನ ತಾರಕೇಶ್ವರ ವಿ.ಬಿ., ಮಾನಸ ಟ್ರಸ್ಟ್ ನ ಡಾ. ರಾಜನಿ ಪೈ, ಸಂಧ್ಯಾ ಕಾವೇರಿ, ಡಾ. ರಾಜೇಂದ್ರ ಚೆನ್ನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News