ಕುಮಾರಸ್ವಾಮಿ ರಾಜೀನಾಮೆ ನೀಡಲಿ: ಯಡಿಯೂರಪ್ಪ

Update: 2019-07-13 12:24 GMT

ಬೆಂಗಳೂರು, ಜು.13: ಮೈತ್ರಿ ಸರಕಾರ ಶಾಸಕರ ವಿಶ್ವಾಸ ಕಳೆದುಕೊಂಡಿದ್ದು, ಬಹುಮತ ಇಲ್ಲವಾಗಿದೆ. ಹೀಗಾಗಿ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ವಿಶ್ವಾಸ ಕಳೆದುಕೊಂಡು ನಾನು ಅಧಿಕಾರದಲ್ಲಿ ಇರಬೇಕಾಗಿಲ್ಲ ಎಂದು ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ವಿಶ್ವಾಸಮತ ಕೋರುವ ಅವರ ಪ್ರಸ್ತಾವವನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಬಹುಮತವಿಲ್ಲ ಎಂದರೆ ರಾಜೀನಾಮೆ ಕೊಟ್ಟು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಬೇಕೆಂದು ಸಲಹೆ ಮಾಡಿದರು.

ಸಮ್ಮಿಶ್ರ ಸರಕಾರದ ಬಗ್ಗೆ ಜನರಿಗೆ ಬೇಸರ ಬಂದಿದೆ. ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರು ಈ ಸರಕಾರ ಹೋಗಬೇಕೆಂದು ಹೇಳುತ್ತಿದ್ದಾರೆ. ಮುಂಬೈನಲ್ಲಿ ಎಲ್ಲ ಶಾಸಕರು ಖುಷಿಯಾಗಿದ್ದಾರೆ. ಅವರ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದು ಅವರು ನುಡಿದರು.

ಸುಪ್ರೀಂಕೋರ್ಟ್‌ನಲ್ಲಿ ವಾದ ಪ್ರತಿವಾದಗಳು ನಡೆಯುತ್ತಿವೆ. ಈ ಹಂತದಲ್ಲಿ ರಾಜೀನಾಮೆ ಸಲ್ಲಿಸಿರುವ ಯಾವ ಶಾಸಕರೂ ತಮ್ಮ ನಿಲುವಿನಿಂದ ಹಿಂದೆ ಸರಿಯಲು ಆಗುವುದಿಲ್ಲ. ಆದರೆ, ಶಿವಕುಮಾರ್ ಮತ್ತು ಇತರರ ಒತ್ತಡದಿಂದ ಎಂಟಿಬಿ ನಾಗರಾಜ್ ಏನೋ ಹೇಳಿರಬಹುದು. ಆದರೆ, ಕೋರ್ಟ್‌ಗೆ ಮನವಿ ಸಲ್ಲಿಸಿರುವವರಲ್ಲಿ ಅವರೂ ಸೇರಿದ್ದಾರೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
-ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷ, ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News