ಚಿಕ್ಕಮಗಳೂರು: ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣ; 7 ತಿಂಗಳಲ್ಲಿ 1 ಕೋ. 30 ಲಕ್ಷ ರೂ. ದಂಡ ಸಂಗ್ರಹ

Update: 2019-07-13 13:43 GMT

ಚಿಕ್ಕಮಗಳೂರು, ಜು.13: ಕಳೆದ 7 ತಿಂಗಳಲ್ಲಿ ಜಿಲ್ಲಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನಗಳ ಚಾಲಕರು ಮತ್ತು ಮಾಲಕರಿಂದ ಜಿಲ್ಲಾ ಪೊಲೀಸ್ ಇಲಾಖೆ ಬರೋಬ್ಬರಿ 1,30,01,300 ರೂ. ದಂಡ ಸಂಗ್ರಹಿಸಿದ್ದು, ಇದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಜಿಲ್ಲಾದ್ಯಂತ ಈ ಸಾಲಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ಇದಕ್ಕೆ ಎಸ್ಪಿ ಹರೀಶ್ ಪಾಂಡೆ ನೇತೃತ್ವದ ಜಿಲ್ಲಾ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಸಂಬಂಧ ಕಟ್ಟುನಿಟ್ಟಿನ ಕ್ರಮವಹಿಸಿರುವುದಕ್ಕೆ ಸಾಕ್ಷಿಯಾಗಿದೆ.

ಭಾರತೀಯ ಮೋಟಾರು ವಾಹನ ಕಾಯ್ದೆಯಂತೆ ನಿರ್ದಿಷ್ಟ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸಿರುವ ನಿರ್ಧಿಷ್ಟ ಪ್ರಮಾಣದ ದಂಡಗಳಡಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈ ದಂಡವನ್ನು ಸಂಗ್ರಹಿಸಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ ಪರಿಣಾಮ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಸಾಲಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ ಜನವರಿ ತಿಂಗಳಲ್ಲಿ ಜಿಲ್ಲಾದ್ಯಂತ 11,677 ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಪೊಲೀಸರು ಒಟ್ಟು 14,36,200 ರೂ. ದಂಡವನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಫೆಬ್ರವರಿ ತಿಂಗಳಲ್ಲಿ 13,113 ಪ್ರಕರಣ ದಾಖಲಾಗಿದ್ದು, ಒಟ್ಟು, 17,00400 ರೂ. ದಂಡ ಸಂಗ್ರಹಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಜಿಲ್ಲಾದ್ಯಂತ ಒಟ್ಟು 17,395 ಪ್ರಕರಣಗಳು ದಾಖಲಾಗಿದ್ದು, ಒಟ್ಟು 20,85,800 ರೂ. ದಂಡ ಸಂಗ್ರಹವಾಗಿದೆ. ಎಪ್ರಿಲ್ ತಿಂಗಳಲ್ಲಿ 14,690 ಪ್ರಕರಣಗಳು ದಾಖಲಾಗಿದ್ದು, 17,07600 ರೂ.ದಂಡ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 16,149 ಪ್ರಕರಣಗಳು ದಾಖಲಾಗಿದ್ದು, 19,36900 ರೂ. ದಂಡ ಸಂಗ್ರಹವಾಗಿದೆ. 2019ರ ಸಾಲಿನಲ್ಲಿ ಜೂನ್ ಹಾಗೂ ಜುಲೈ 1ರಿಂದ ಇದುವರೆಗೂ ತಲಾ 16,521 ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಡಿಯಲ್ಲಿ ತಲಾ 20,67,200 ರೂ. ದಂಡವನ್ನು ಜಿಲ್ಲಾ ಪೊಲೀಸ್ ಇಲಾಖೆ ಸಂಗ್ರಹವಾಗಿದೆ. ಒಟ್ಟಾರೆ ಕಳೆದ ಜನವರಿಯಿಂದ ಜುಲೈವರೆಗೂ ಜಿಲ್ಲಾದ್ಯಂತ ಒಟ್ಟು 1,06,066 ಪ್ರಕರಣಗಳು ದಾಖಲಾಗಿದ್ದು, 1,30,01,300 ರೂ. ದಂಡ ಸಂಗ್ರಹವಾಗಿದೆ. 

ಇತ್ತೀಚೆಗೆ ರಾಜ್ಯ ಸರಕಾರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ದಂಡಗಳ ಪ್ರಮಾಣವನ್ನು ಪರಿಷ್ಕರಿಸಿ ದಂಡದ ಪ್ರಮಾಣವನ್ನು ಹೆಚ್ಚಿಸಿದೆ. ಆದರೂ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿಲ್ಲ ಎಂಬುದು ಪೊಲೀಸ್ ಇಲಾಖೆಯ ಸಂಚಾರಿ ಪೊಲೀಸರು ಈ ಸಾಲಿನಲ್ಲಿ ಪ್ರತೀ ತಿಂಗಳು ದಾಖಲಿಸಿರುವ ಪ್ರಕರಣ ಅಂಕಿಅಂಶಗಳಿಂದ ಸಾಭೀತಾಗುತ್ತಿದೆ.

ಇನ್ನು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ 2017ರಲ್ಲಿ ಜಿಲ್ಲಾದ್ಯಂತ 11,8,699 ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಒಟ್ಟು 1,59,52,700 ರೂ. ದಂಡವನ್ನು ಸಂಗ್ರಹಿಸಿತ್ತು. 2018ರಲ್ಲಿ ಜಿಲ್ಲಾದ್ಯಂತ ಒಟ್ಟು 133902 ಪ್ರಕರಣಗಳು ದಾಖಲಾಗಿದ್ದು, 1,80,26,950 ರೂ. ದಂಡವನ್ನು ಸಂಗ್ರಹಿಸಿತ್ತು. ಆದರೆ 2019ರ ಸಾಲಿನಲ್ಲಿ ಕಳೆದ ಜನವರಿಯಿಂದ ಜುಲೈವರೆಗೆ ಜಿಲ್ಲೆಯಾದ್ಯಂತ ಒಟ್ಟು 1,06,066 ಪ್ರಕರಣಗಳು ದಾಖಲಾಗಿದ್ದು, 1,30,01,300 ರೂ. ದಂಡ ಸಂಗ್ರಹವಾಗಿದೆ. ಆದರೆ 2019ರ ಸಾಲು ಪೂರ್ಣಗೊಳ್ಳಲು ಇನ್ನೂ 5 ತಿಂಗಳು ಬಾಕಿ ಇದ್ದು, ಬಾಕಿ ಅವಧಿಯಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ದಂಡ ಸಂಗ್ರಹ ಪ್ರಮಾಣದಲ್ಲೂ ಏರಿಕೆಯಾಗಲಿದ್ದು, ಇದು ಕಳೆದ ಸಾಲಿನಲ್ಲಿ ಸಂಗ್ರಹವಾದ ದಂಡ ಮೊತ್ತಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಹೀಗೇನಾದರೂ ಆದಲ್ಲಿ ಇದಕ್ಕೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ ಕಾರಣವಾಗಲಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರು, ಕಾರ್ಮಿಕರನ್ನು ಸಾಗಿಸುವುದನ್ನು ನಿಷೇದಿಸಿ ಕಾನೂನು ಜಾರಿ ಮಾಡಿದೆ. ಈ ಕಾನೂನನ್ನು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಕಟ್ಟುನಿಟ್ಟಿನಿಂದ ಜಾರಿ ಮಾಡುತ್ತಿದೆ. ಅಲ್ಲದೇ ಈ ಸಂಬಂಧ ಸರಕು ಸಾಗಣೆ ವಾಹನಗಳ ಮಾಲಕರು, ಚಾಲಕರ ಸಭೆ ಕರೆದು ತಿಳುವಳಿಕೆ ನೀಡಲಾಗಿತ್ತು. ಆದರೂ ಜಿಲ್ಲಾಡಳಿತದ ಆದೇಶ ಮೀರಿ ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಸಾಗಿಸುತ್ತಿದ್ದ ಆರೋಪ ಮೇರೆಗೆ ಸಂಚಾರಿ ಪೊಲೀಸರು ಇದುವರೆಗೂ 867 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಒಟ್ಟು 1,75,700 ರೂ. ದಂಡ ಸಂಗ್ರಹಿಸಿದೆ. ಅಲ್ಲದೇ ಆಟೊ ರಿಕ್ಷಾಗಳಲ್ಲಿ ಮಿತಿ ಮೀರಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಇದುವರೆಗೂ 22 ಪ್ರಕರಣಗಳನ್ನು ದಾಖಲಿಸಿಕೊಂಡು 7500 ರೂ. ದಂಡವನ್ನು ಪೊಲೀಸ್ ಇಲಾಖೆ ಸಂಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News