ಶಾಸಕರ ರಾಜೀನಾಮೆಗೆ ಸಂಬಂಧಿಸಿದ ಪ್ರಮಾಣಪತ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ

Update: 2019-07-13 14:34 GMT

ಬೆಂಗಳೂರು, ಜು.13: ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ವಿವರವಾದ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಅತೃಪ್ತ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಅನರ್ಹಗೊಂಡ ಬಳಿಕ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಜು.11 ರ ಸಂಜೆ 6 ಗಂಟೆಯೊಳಗೆ ಸಭಾಧ್ಯಕ್ಷರ ಎದುರು ಹಾಜರಾಗಿ, ರಾಜೀನಾಮೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್ ಸೂಚನೆಯನ್ವಯ ರಮೇಶ್ ಕುಮಾರ್ ಸಂಪೂರ್ಣ ವಿವರಗಳಿರುವ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.

ಸಭಾಧ್ಯಕ್ಷರು, ರಾಜೀನಾಮೆ ಸಲ್ಲಿಕೆಯ ಶಾಸಕರ ವಿಚಾರಣೆಗಳನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಿಸಿದ್ದರು. ಪ್ರಮಾಣ ಪತ್ರದ ಜತೆಗೆ ವಿಡಿಯೋ ತುಣುಕುಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಅದರಲ್ಲಿ ಶಾಸಕರ ರಾಜೀನಾಮೆ ವಿಚಾರ ಹಾಗೂ ಇಬ್ಬರು ಶಾಸಕರ ಅನರ್ಹತೆಗೆ ಸಂಬಂಧಿಸಿದ ವಿವರಣೆಯೂ ಇದೆ ಎನ್ನಲಾಗಿದೆ.

ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ವಿರುದ್ಧದ ಅನರ್ಹತೆ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಅದರ ಜೊತೆಗೆ ಜುಲೈ 10 ಕ್ಕೆ ಕಾಂಗ್ರೆಸ್ ಪಕ್ಷ 8 ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ದೂರು ನೀಡಿದೆ ಎಂದು ಸ್ಪೀಕರ್ ಅತೃಪ್ತ ಶಾಸಕರ ಅರ್ಜಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಅತೃಪ್ತರಾದ ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ಆನಂದ್ ಸಿಂಗ್ ಹಾಗೂ ರೋಶನ್ ಬೇಗ್‌ರನ್ನು ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News