ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಅತೃಪ್ತರ ಪ್ರಮಾಣ?

Update: 2019-07-13 14:54 GMT

ಮುಂಬೈ, ಜು.13: ಮುಂಬೈ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ 12 ಮಂದಿ ಅತೃಪ್ತ ಶಾಸಕರು ಇಂದು ಶಿರಡಿ ಶ್ರೀ ಸಾಯಿಬಾಬಾ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಪ್ರಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ

ಶಾಸಕರು ಇಂದು ಎರಡು ವಿಶೇಷ ವಿಮಾನಗಳಲ್ಲಿ ಶಿರಡಿ ಶ್ರೀ ಸಾಯಿಬಾಬಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಒಕ್ಕೊರಲಿನಿಂದ ಬಾಬಾರವರ ಮುಂದೆ ನಿಂತು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಾಗಲೀ, ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಲೀ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ.

ಜು.6 ರಂದು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ನೀಡಿರುವ ಶಾಸಕರ ಎಚ್.ವಿಶ್ವನಾಥ್, ನಾರಾಯಣಗೌಡ, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಪ್ರತಾಪ್‍ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಗೇಶ್, ಆರ್.ಶಂಕರ್ ಅವರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. 

ಒಂದೆಡೆ ಅತೃಪ್ತರ ಮನವೊಲಿಕೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದೆಡೆ ನ್ಯಾಯಾಲಯದಲ್ಲಿ ಸ್ಪೀಕರ್ ಕ್ರಮ ಆಕ್ಷೇಪಿಸಿ  ಕಾನೂನು ಹೋರಾಟ ಮುಂದುವರೆದಿದೆ. ಇಂದು ಮತ್ತೆ  ಐವರು ಶಾಸಕರು  ತಮ್ಮ ರಾಜೀನಾಮೆಯನ್ನೂ ಕೂಡ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಶಾಸಕರು ರೆಸಾರ್ಟ್ ಹಾಗೂ ಹೊಟೇಲ್‍ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ರಾಜಕೀಯ ವಿಪ್ಲವ ಪರಿಸ್ಥಿತಿ ತಲುಪಿದೆ. ಇಂತಹ ಸಂದರ್ಭದಲ್ಲಿ ಅತೃಪ್ತರು ತಮ್ಮ ಪಟ್ಟು ಸಡಿಲಿಸದೆ ದೇವರ ಮುಂದೆ ಪ್ರಮಾಣ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News