ಮೈತ್ರಿ ಸರಕಾರದ ಉಳಿವಿಗೆ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ಕಣಕ್ಕೆ

Update: 2019-07-13 15:15 GMT

ಬೆಂಗಳೂರು, ಜು.2: ಸರಕಾರವನ್ನು ಹೇಗಾದರು ಮಾಡಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ನಾಯಕರು ಎಲ್ಲ ರೀತಿಯ ಕಾರ್ಯತಂತ್ರಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಎಐಸಿಸಿ ವಕ್ತಾರ ಗುಲಾಂ ನಬಿ ಆಝಾದ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಕಣಕ್ಕಿಳಿದಿದ್ದಾರೆ.

ಮೈತ್ರಿ ಸರಕಾರದ ಕಾರ್ಯವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆಗೆ ಮೊದಲ ಪ್ರಯತ್ನ ನಡೆಯುತ್ತಿದ್ದು, ಅದರ ಭಾಗವಾಗಿ ಎಂಟಿಬಿ ನಾಗರಾಜ್, ಸುಧಾಕರ್, ರಾಮಲಿಂಗಾರೆಡ್ಡಿ, ಭೈರತಿ ಬಸವರಾಜ್, ಮುನಿರತ್ನ ಹಾಗೂ ರೋಶನ್‌ ಬೇಗ್‌ರನ್ನು ಮನವೊಲಿಸುವ ಪ್ರಯತ್ನ ನಡೆದಿದೆ.

ಮೊದಲ ಸುತ್ತಿನ ಮನವೊಲಿಕೆಯ ಪ್ರಯತ್ನವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ದಿನೇಶ್‌ಗುಂಡೂರಾವ್ ನೇತೃತ್ವದಲ್ಲಿ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡು ಬಂದಿದೆ. ಈಗಾಗಲೆ ಎಂಟಿಬಿ ನಾಗರಾಜ್, ರಾಮಲಿಂಗಾರೆಡ್ಡಿ, ರೋಶನ್‌ ಬೇಗ್, ಸುಧಾಕರ್ ರಾಜೀನಾಮೆ ವಾಪಸ್ ಪಡೆಯಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡನೆ ಪ್ರಯತ್ನವಾಗಿ ಎಐಸಿಸಿ ವಕ್ತಾರ ಗುಲಾಂ ನಬಿ ಆಝಾದ್ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ನಾಯಕರು ಅತೃಪ್ತ ನಾಯಕರನ್ನು ಮನವೊಲಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸನ್ನು ಕಟ್ಟಿ ಬೆಳೆಸಿದವರೆ ರಾಜೀನಾಮೆ ಸಲ್ಲಿಸಿರುವುದನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮನಸ್ತಾಪ ಉಂಟಾಗದಂತೆ ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರಿಗೂ ಸಮಾನವಾದ ಮಾನ್ಯತೆ ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡುವಂತಹ ಭರವಸೆಯೊಂದಿಗೆ ಅತೃಪ್ತರನ್ನು ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News