ಶಾಸಕರ ಮೇಲೆ ಹದ್ದಿನ ಕಣ್ಣು: ಶಾಸಕರಿಗೆ ಹಿರಿಯ ನಾಯಕರಿಂದ ನೀತಿ ಪಾಠ

Update: 2019-07-13 15:38 GMT

ಬೆಂಗಳೂರು, ಜು.13: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆಗೆ ಸಿದ್ಧನಿದ್ದೇನೆಂಬ ಹೇಳಿಕೆಯ ಬೆನ್ನಲ್ಲೆ ರಾಜ್ಯದ ಎಲ್ಲ ಪಕ್ಷಗಳ ಶಾಸಕರ ಮೇಲೆ ಆಯಾ ಪಕ್ಷದ ಹೈಕಮಾಂಡ್ ಹದ್ದಿನ ಕಣ್ಣಿಟ್ಟಿದೆ.

ಶುಕ್ರವಾರ ಸಂಜೆಯೆ ಬಿಜೆಪಿ ಶಾಸಕರು ರಾಜಾನುಕುಂಟೆಯಲ್ಲಿರುವ ರಮಾಡ ಹೊಟೇಲ್, ಕಾಂಗ್ರೆಸ್ ಶಾಸಕರು ಯಶವಂತಪುರದ ತಾಜ್ ವಿವಾಂತ ಹೊಟೇಲ್ ಹಾಗೂ ಜೆಡಿಎಸ್ ಶಾಸಕರು ಪ್ರೆಸ್ಟೀಜ್ ಗಾಲ್ಫ್ ಶೇರ್ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಿದ್ದು, ಸೋಮವಾರದ ಅಧಿವೇಶನಕ್ಕೆ ಅಲ್ಲಿಂದಲೆ ಬರಲಿದ್ದಾರೆ.

ಬಿಜೆಪಿ ತಳಮಳ: ಮೇಲ್ನೋಟಕ್ಕೆ ಮೈತ್ರಿ ಸರಕಾರದ ಬಹುಮತ ಕುಸಿದಿದ್ದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ನಾನು ಸಿದ್ಧನೆಂದು ಹೇಳಿರುವುದು ಬಿಜೆಪಿ ಪಾಳಯದಲ್ಲಿ ನಡುಕು ಹುಟ್ಟಿಸಿದ್ದು, ಬಿಜೆಪಿ ಶಾಸಕರನ್ನು ಸೆಳೆಯುವ ಹುನ್ನಾರ ಅವರ ಮಾತಿನಲ್ಲಿ ಅಡಗಿದೆಯೆ ಎಂಬುದರ ಬಗ್ಗೆ ಆಂತಕಕ್ಕೆ ಒಳಗಾಗಿದೆ.

ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವವರೆಗೆ ಬಿಜೆಪಿ ಶಾಸಕರನ್ನು ಕಾಯಲು ರೆಸಾರ್ಟ್‌ನಲ್ಲಿಟ್ಟು, ಯಾವುದೆ ಆತಂಕ, ಆಮಿಷಕ್ಕೆ ಒಳಗಾಗಬೇಡಿ. ಒಗ್ಗಟ್ಟು ಕಾಪಾಡಿಕೊಳ್ಳಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಅದೇ ಮಾದರಿಯಲ್ಲಿ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಲ್ಲಿಟ್ಟು, ಹಿರಿಯ ಕಾಂಗ್ರೆಸ್ ಮುಖಂಡರಿಂದ ಶಾಸಕರಿಗೆ ನೀತಿ ಪಾಠ ಹೇಳಿಸಲಾಗುತ್ತಿದೆ. ಮೈತ್ರಿ ಸರಕಾರಕ್ಕೆ ಯಾವುದೆ ಸಮಸ್ಯೆಯಾಗುವುದಿಲ್ಲ. ಬಿಜೆಪಿಯ ಷಡ್ಯಂತ್ರಗಳು ಫಲಿಸುವುದಿಲ್ಲ. ಒಂದೆರಡು ದಿನದಲ್ಲಿ ಎಲ್ಲವೂ ಬಗೆಹರಿಯಲಿದೆ. ಸರಕಾರ ಸುಸೂತ್ರವಾಗಿ ನಡೆಯಲಿದೆ ಎಂಬ ಮಾತುಗಳ ಮೂಲಕ ವಿಶ್ವಾಸ ಮೂಡಿಸಲಾಗುತ್ತಿದೆ.
ಇನ್ನೊಂದೆಡೆ ವಿಶ್ವಾಸಮತಯಾಚಿಸಿ ಸರಕಾರವನ್ನು ಉಳಿಸಿಕೊಳ್ಳಲು ಪಣತೊಟ್ಟಿರುವ ಎಚ್.ಡಿ.ಕುಮಾರಸ್ವಾಮಿ, ತಮ್ಮ ಶಾಸಕರು ಒಗ್ಗಟ್ಟಿನಿಂದ ಇರಬೇಕು. ಬಿಜೆಪಿ ಷಡ್ಯಂತ್ರಗಳಿಗೆ, ಆಮಿಷಗಳಿಗೆ ಬಲಿಯಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬ ಶಾಸಕರ ಬಳಿಯು ವೈಯಕ್ತಿಕವಾಗಿ ಮಾತನಾಡಿ, ವಿಶ್ವಾಸ ಮೂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ
ಅತೃಪ್ತ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಂಡು ಸರಕಾರ ರಚಿಸಲು ಬಿಜೆಪಿ ವರಿಷ್ಠರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಅತೃಪ್ತರ ಆಗಮನದಿಂದ ಮೂಲ ಬಿಜೆಪಿ ನಾಯಕರ ವರ್ಚಸ್ಸಿಗೆ ಧಕ್ಕೆ ಆಗಲಿದ್ದು, ಯಾವುದೆ ಕಾರಣಕ್ಕೂ ಅವರನ್ನು ಬರಮಾಡಿಕೊಳ್ಳಬಾರದು ಎಂಬ ಒತ್ತಾಯಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಉಲ್ಬಣಿಸುತ್ತಿದೆ ಎನ್ನಲಾಗಿದೆ.

ಶಾಸಕ ಸತೀಶ್‌ರೆಡ್ಡಿ, ನೆ.ಲ.ನರೇಂದ್ರಬಾಬು ಬಹಿರಂಗವಾಗಿಯೆ ಅತೃಪ್ತರು ಬಿಜೆಪಿ ಸೇರುವುದನ್ನು ವಿರೋಧಿಸಿದ್ದಾರೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಬಿ.ಎಸ್.ಯಡಿಯೂರಪ್ಪ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಸಮಸ್ಯೆ ಬಿಜೆಪಿಗೆ ಮುಳುವಾಗುವ ಸಾಧ್ಯತೆಯು ಹೆಚ್ಚಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News