ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು

Update: 2019-07-13 17:16 GMT

ಮೈಸೂರು,ಜು.13: ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿ ಅಧಿಕಾರ ನಡೆಸಲಿದೆ ಎಂದು ಹೇಳುವ ಮೂಲಕ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಟಿ.ನರಸೀಪುರ ತಾಲ್ಲೂಕಿನ ಹಿಟ್ಟುವಳ್ಳಿ ಗ್ರಾಮದಲ್ಲಿ ಶನಿವಾರ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸುತ್ತದೆ ಎಂದು ನಾನು ಹೇಳುವುದಿಲ್ಲ ಎಂಬ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಏಕೆ ಜಿ.ಟಿ.ದೇವೇಗೌಡರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ, ಬಿಜೆಪಿಯವರು ಪದೇ ಪದೇ ಈ  ರೀತಿಯ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದನ್ನು ನೋಡಿ ಈ ರೀತಿ ಹೇಳಿರಬಹುದು. ಆದರೆ ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿ ಅಧಿಕಾರ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತೃಪ್ತ ಶಾಸಕರನ್ನು ನಮ್ಮ ನಾಯಕರು ಮನವೊಲಿಸುತ್ತಿದ್ದಾರೆ. ಅಲ್ಲದೇ ಖುದ್ದು ಮುಖ್ಯಮಂತ್ರಿಗಳೇ ಅತೃಪ್ತರ ಮನವೊಲಿಸುತ್ತಿದ್ದಾರೆ. ಇದೊಂದು ಪರಿಸ್ಥಿತಿ ಮೈತ್ರಿ ಪಕ್ಷ ಎದುರಿಸಿದರೆ ಇನ್ನುಳಿದ ನಾಲ್ಕು ವರ್ಷ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಗಂಡಾಂತರ ಎದುರಾಗುವುದಿಲ್ಲ. ಆದ್ದರಿಂದ ನಾವು ಆ  ಕೆಲಸವನ್ನು ವಿಶ್ವಾಸದಿಂದ ಮಾಡಬೇಕು. ಮುಖ್ಯಮಂತ್ರಿಗಳು ಸರಕಾರದ ಮೇಲೆ ತುಂಬಾ ವಿಶ್ವಾಸ ಹೊಂದಿದ್ದಾರೆ. ಕೆಲ ಅತೃಪ್ತ ಶಾಸಕರನ್ನು ಸೆಳೆದರೆ ಉಳಿದ ಅತೃಪ್ತ ಶಾಸಕರು ಬರುವ ವಿಶ್ವಾಸವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News