ಸರಕಾರ ವಿಸರ್ಜಿಸುವುದೇ ಸೂಕ್ತ: ರಘು ಆಚಾರ್

Update: 2019-07-13 18:50 GMT

ಚಿತ್ರದುರ್ಗ, ಜು.13: ಪ್ರಸ್ತುತ ರಾಜಕೀಯ ಸನ್ನಿವೇಶ ಗಮನಿಸಿದರೆ, ಮೈತ್ರಿ ಸರಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಉತ್ತಮ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹೇಳಿಕೆ ನನ್ನ ವೈಯಕ್ತಿಕ ಅನಿಸಿಕೆ. ಆದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕರೆ, ಅಲ್ಲಿಯೂ ಕೂಡ ಇದೇ ಮಾತನ್ನೇ ಹೇಳುತ್ತೇನೆ ಎಂದು ತಿಳಿಸಿದರು.

ಕರ್ನಾಟಕದ ರಾಜಕೀಯ ದೇಶಕ್ಕೆ ಮಾದರಿಯಾಗಬೇಕು. ಆದರೆ, ಇಲ್ಲಿ ದೊಂಬರಾಟ ಶುರುವಾಗಿದೆ. ಮುಖ್ಯಮಂತ್ರಿ ಆಗಲಿ, ಸಚಿವನಾಗಲಿ ಎಂದು ಮತದಾರರು ಗೆಲ್ಲಿಸಿ ಕಳಿಸುವುದಿಲ್ಲ. ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗುವುದೇ ದೊಡ್ಡ ವಿಚಾರ. ಅದನ್ನು ಗಮನದಲ್ಲಿಟ್ಟುಕೊಂಡು 5 ವರ್ಷ ಅವಧಿ ಮುಗಿಯುವವರೆಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಬೇಕು ಹೊರತು ಸಚಿವ ಸ್ಥಾನ, ಇತರೆ ಅಧಿಕಾರಕ್ಕಾಗಿ ಲಾಬಿ ಮಾಡುವುದಕ್ಕೆ ಅಲ್ಲ ಎಂದರು.

ಈಗಾಗಲೇ ಅತೃಪ್ತ ಶಾಸಕರ ಚೆಂಡು ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸರಕಾರ ಉಳಿಯುವ ವಿಶ್ವಾಸ ನನಗೂ ಇದೆ. ಆದರೆ, ಅತೃಪ್ತರನ್ನು ಬೇಡಿ, ಪುನಃ ಮನವೊಲಿಸಿ ಕರೆತಂದು ಸರಕಾರ ಮುನ್ನಡೆಸುವುದು ಸರಿಯಲ್ಲ ಅನಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಹುಮತ ಸಾಬೀತು ಪಡಿಸುವ ವಿಶ್ವಾಸದಲ್ಲಿದ್ದಾರೆ. ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ರಾಜೀನಾಮೆ ನೀಡಿದವರು ಕ್ಷೇತ್ರದಲ್ಲಿ ಪುನಃ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ರಾಜ್ಯದ ಜನತೆ ಈ ಜನಪ್ರತಿನಿಧಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಖಂಡಿತ ಸೋಲಿಸುತ್ತಾರೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News