ಕೊಡಗಿನ ಕ್ರೀಡಾ ಪ್ರತಿಭೆಗಳಿಗೆ ಸುವರ್ಣವಕಾಶ : ಜು.17 ಮತ್ತು 20 ರಂದು ಕ್ರಿಕೆಟ್ ಪ್ರತಿಭಾನ್ವೇಷಣೆ

Update: 2019-07-13 18:57 GMT

ಮಡಿಕೇರಿ, ಜು.13 : ಕರ್ನಾಟಕದ ಗ್ರಾಮೀಣ ಪ್ರದೇಶಗಳ ಹಾಗೂ ಒಳಭಾಗಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ತನ್ನ ಬದ್ಧತೆಯ ಭಾಗವಾಗಿ, ಮೈಸೂರು ವಾರಿಯರ್ಸ್‍ನ ಮಾಲೀಕರಾದ ಎನ್‍ಆರ್ ಸಮೂಹ, ಕ್ರಿಕೆಟ್ ಪ್ರತಿಭಾನ್ವೇಷಣೆಯ ಆರನೇ ಆವೃತ್ತಿಯನ್ನು ಆಯೋಜಿಸಿದೆ.

ಜುಲೈ 17ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಮತ್ತು  20  ರಂದು ಮೈಸೂರಿನ ಎಸ್‍ಡಿಎನ್‍ಆರ್ ಮೈದಾನದಲ್ಲಿ ಪ್ರತಿಭಾನ್ವೇಷಣೆ ನಡೆಯಲಿದ್ದು, ಕರ್ನಾಟಕದ ಯಾವುದೇ ಭಾಗದ ಯುವ, ಪ್ರತಿಭಾವಂತ ಕ್ರಿಕೆಟ್ ಆಟಗಾರರು ಭಾಗವಹಿಸಬಹುದಾಗಿದೆ.

ಇಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ಪ್ರತಿಭಾ ಅನ್ವೇಷಣೆ ಮುಖ್ಯವಾಗಿ ಕರ್ನಾಟಕದ ಕೆಎಸ್‍ಸಿಎ ನೋಂದಾಯಿತ ಕ್ಲಬ್‍ಗಳ ಕೆಎಸ್‍ಸಿಎ ನೋಂದಾಯಿತ ಸದಸ್ಯರಿಗಾಗಿ ಆಯೋಜಿಸಲಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ಅನೇಕ ಪ್ರತಿಭಾವಂತ ಆಟಗಾರರು ಇದ್ದು, ಯುವ ಪ್ರತಿಭಾವಂತ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಜೊತೆಗೆ ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ ಪೋಷಿಸುವ  ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.  

ಪ್ರಸ್ತುತ ಆವೃತ್ತಿಯಲ್ಲಿ ಆಯ್ಕೆಯಾಗುವ ಆಟಗಾರರು ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯುವ ಕೆಪಿಎಲ್ -2019ರ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯಲಿದ್ದಾರೆ.

ಪ್ರತಿಭಾನ್ವೇಷಣೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮೈಸೂರು ವಾರಿಯರ್ಸ್‍ನ ಮಾಲಕ ಅರ್ಜುನ್ ರಂಗ ಅವರು, ಎನ್‍ಆರ್ ಸಮೂಹವು ಯಾವಾಗಲೂ ಕ್ರೀಡಾ ಪ್ರತಿಭೆಯನ್ನು ಪೋಷಿಸುವುದರಲ್ಲಿ ನಂಬಿಕೆ ಹೊಂದಿದೆ. ಅದು ಕ್ರಿಕೆಟ್ ಆಗಿರಬಹುದು ಅಥವಾ ಯಾವುದೇ ಇತರ ಕ್ರೀಡೆಯಾಗಿರಬಹುದು. ಪ್ರತಿಭಾನ್ವೇಷಣೆಯಂತಹ ವಿಶಿಷ್ಟ ಉಪಕ್ರಮವನ್ನು ಆಯೋಜಿಸಲು ಮತ್ತು ಕ್ರಿಕೆಟ್‍ನ ಯುವ ಪ್ರತಿಭಾವಂತರಿಗೆ ಮೈಸೂರು ವಾರಿಯರ್ಸ್ ತಂಡದಲ್ಲಿ ಅವಕಾಶ ನೀಡಲು ನಮಗೆ ಹೆಮ್ಮೆ ಎನಿಸುತ್ತದೆ.  ಪ್ರತಿಭಾನ್ವೇಷಣೆಯಂತಹ ಕಾರ್ಯಕ್ರಮದ ಮೂಲಕ ತೆರೆಯ ಹಿಂದಿರುವ ಉತ್ತಮ ಆಟಗಾರರಿಗೆ ಅವರ ಪ್ರತಿಭೆ ಮತ್ತು ಕೌಶಲವನ್ನು ಪ್ರದರ್ಶಿಸಲು ವೇದಿಕೆ ಒದಗಿಸುವುದು ನಮ್ಮ ಮುಂದಿನ ಗುರಿಯಾಗಿದೆ ಎಂದರು.

ಮೈಸೂರನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಬರುವ ಆಟಗಾರರಿಗೆ ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯ ಸಿಂಗನಾಯಕನ ಹಳ್ಳಿಯಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಜು.17ರಂದು ಬೆಳಗ್ಗೆ  8 ಗಂಟೆಯಿಂದ ಹಾಗೂ ಮೈಸೂರು ಭಾಗದ ಆಟಗಾರರಿಗೆ ಮೈಸೂರು ವಿವಿಯ ಎಸ್‍ಡಿಎನ್‍ಆರ್ ಮೈದಾನದಲ್ಲಿ ಜು.20ರಂದು ಬೆಳಗ್ಗೆ 8ಗಂಟೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮಾಹಿತಿಗಾಗಿ 9986024717 (ಮಧುಸೂದನ) ಹಾಗೂ 9900545191 (ಸೋಮಶೇಖರ) ಅವರನ್ನು ಸಂಪರ್ಕಿಸಬಹುದಾಗಿದೆ.

ಮೈಸೂರು ವಾರಿಯರ್ಸ್‍ನಿಂದ ಕಳೆದ ವರ್ಷ ಮೈಸೂರಿನಲ್ಲಿ  ನಡೆಸಲಾದ ಕ್ರಿಕೆಟ್ ಪ್ರತಿಭಾನ್ವೇಷಣೆಯಲ್ಲಿ ವಿವಿಧ ಭಾಗಗಳಿಂದ 240 ಯುವ, ಪ್ರತಿಭಾವಂತ ಆಟಗಾರರು ಪಾಲ್ಗೊಂಡಿದ್ದರು. ಅದರಲ್ಲಿ 70 ಜನ ಬ್ಯಾಟ್ಸ್ ಮನ್‍ಗಳು, 82 ಆಲ್ ರೌಂಡರ್‍ಗಳು, 68 ಜನ ಸ್ಪಿನ್ನರ್‍ಗಳು, 15 ಜನ ವಿಕೆಟ್ ಕೀಪರ್‍ಗಳಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರತಿಭಾನ್ವೇಷಣೆಯಲ್ಲಿ 250 ಆಟಗಾರರು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡಿದ್ದು, ಅವರಲ್ಲಿ 75 ಜನ ಮೀಡಿಯಂ ಫೇಸ್ ಬೌಲರ್‍ಗಳು, 50 ಜನ ಸ್ಪಿನ್ನರ್‍ಗಳು  60 ಜನ ಬ್ಯಾಟ್ಸ್ ಮನ್‍ಗಳು, 55 ಆಲ್ ರೌಂಡರ್‍ಗಳು, 10 ಜನ ವಿಕೇಟ್ ಕೀಪರ್‍ಗಳಿದ್ದು, ಇಷ್ಟೂ ಜನ ಆಕಾಂಕ್ಷಿಗಳಲ್ಲಿ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಅವರು  ವಾರಿಯರ್ಸ್ ತಂಡದ ಆಟಗಾರರಾಗಿ ಆಯ್ಕೆಯಾಗಿದ್ದರು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News