ರಾಜೀನಾಮೆ ನಿರ್ಧಾರ ಅಚಲ, ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಅತೃಪ್ತ ಶಾಸಕರ ಸ್ಪಷ್ಟನೆ

Update: 2019-07-14 13:40 GMT

ಮುಂಬೈ/ಬೆಂಗಳೂರು, ಜು. 14: ‘ರಾಜೀನಾಮೆ ನಿರ್ಧಾರ ಅಚಲ. ಈಗಾಗಲೇ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಒಟ್ಟಾಗಿ ಒಗ್ಗಟ್ಟಿನಿಂದಲೇ ಇದ್ದೇವೆ’ ಎಂದು ಅತೃಪ್ತ ಶಾಸಕರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ಮುಂಬೈನಲ್ಲಿ ತುರ್ತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಸಚಿವ ಎಂಟಿಬಿ ನಾಗರಾಜ್ ಅವರು ಅತೃಪ್ತ ಶಾಸಕರ ಮನವೊಲಿಕೆ ಮಾಡಲು ಇಲ್ಲಿಗೆ ಬಂದಿಲ್ಲ. ಬದಲಿಗೆ ಅವರೂ ನಮ್ಮೊಂದಿಗೆ(ಅತೃಪ್ತರು) ಸೇರಿಕೊಳ್ಳಲು ಆಗಮಿಸಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ.ಸುಧಾಕರ್ ಸೇರಿದಂತೆ 13 ಮಂದಿ ಶಾಸಕರು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಯಾವುದೇ ಒತ್ತಡ, ಆಮಿಷಗಳಿಗೆ ಬಲಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ಅವರು ರಾಜೀನಾಮೆ ನೀಡುವ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದು, ಆ ಹಿನ್ನೆಲೆಯಲ್ಲಿ ಅವರು ಹೊಸದಿಲ್ಲಿಯಲ್ಲಿದ್ದಾರೆ. ಅವರು ಶೀಘ್ರದಲ್ಲೆ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ. ರಾಜೀನಾಮೆ ನೀಡಿದ ಎಲ್ಲ ಶಾಸಕರು ಒಟ್ಟಿಗೆ ಇದ್ದೇವೆ ಎಂದು ಸೋಮಶೇಖರ್ ತಿಳಿಸಿದರು.

ಕೆಲ ಮಾಧ್ಯಮಗಳಲ್ಲಿ ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಗುಂಪುಗಳಾಗಿದ್ದು, ಪ್ರತ್ಯೇಕವಾಗಿದ್ದಾರೆಂಬುದು ಸತ್ಯಕ್ಕೆ ದೂರ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮೆಲ್ಲರದ್ದೂ ಒಂದೇ ಅಭಿಪ್ರಾಯ. ಪಕ್ಷೇತರ ಶಾಸಕರಿಬ್ಬರ ಅಭಿಪ್ರಾಯ ಅವರದ್ದು ಎಂದು ಸೋಮಶೇಖರ್ ತಿಳಿಸಿದರು.

ಆರ್.ಅಶೋಕ್ ಭೇಟಿ ಕಾಕತಾಳಿಯ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಡಾ.ಸುಧಾಕರ್ ಮತ್ತು ನಾನು ಒಟ್ಟಿಗೆ ರಾಜೀನಾಮೆ ನೀಡಿದ್ದೇವೆ. ಆದರೆ, ನಾನು ಮುಂಬೈಗೆ ಆಗಮಿಸುವ ವೇಳೆ ಬಿಜೆಪಿ ಮುಖಂಡ ಆರ್.ಅಶೋಕ್ ಅಲ್ಲಿಗೆ ಬಂದದ್ದು ಕೇವಲ ಕಾಕತಾಳಿಯ ಅಷ್ಟೇ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಪ್ರತಿನಿತ್ಯ ಮುಂಬೈಗೆ ನೂರಾರು ರಾಜಕೀಯ ಮುಖಂಡರು ಬಂದು- ಹೋಗುತ್ತಿರುತ್ತಾರೆ. ಆದರೆ, ಬಿಜೆಪಿ ಮುಖಂಡ ಆರ್. ಅಶೋಕ್ ನಮ್ಮೊಂದಿಗೆ ಬಂದಿಲ್ಲ ಎಂದ ಅವರು, ನಾವು ಯಾರನ್ನೂ ಸಂಪರ್ಕ ಮಾಡುವುದಿಲ್ಲ. ನಾವು ಯಾರೊಬ್ಬರನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್‌ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾಳ, ಬೈರತಿ ಬಸವರಾಜ್, ಎಚ್.ವಿಶ್ವನಾಥ್, ಕೆ.ಗೋಪಾಲಯ್ಯ, ನಾರಾಯಣಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News