ಮೈತ್ರಿ ಬಿಕ್ಕಟ್ಟಿಗೆ ಇದುವೇ ಕಾರಣ...: ಅತೃಪ್ತ ಶಾಸಕರಿಂದ ಮತದಾರರ ವಾಟ್ಸಾಪ್ ಗೆ ಸಂದೇಶ

Update: 2019-07-14 15:01 GMT

ಬೆಂಗಳೂರು, ಜು.14: ಮೈತ್ರಿ ಸರಕಾರದ ಬಿಕ್ಕಟ್ಟಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಹಸ್ತಕ್ಷೇಪ ಹಾಗೂ ಮೈತ್ರಿ ಸರಕಾರದ ವೈಖರಿ ಪ್ರಮುಖ ಕಾರಣವೆಂದು ಅತೃಪ್ತ ಶಾಸಕರು ವಾಟ್ಸಾಪ್ ಸಂದೇಶದ ಮೂಲಕ ಕ್ಷೇತ್ರದ ಮತದಾರರ ಮೊಬೈಲ್‌ಗಳಿಗೆ ತಿಳಿಸಿದ್ದಾರೆ.

ಅತೃಪ್ತ ಶಾಸಕರ ವಿರುದ್ಧ ಅವರು ಪ್ರತಿನಿಧಿಸುವ ಕ್ಷೇತ್ರದ ಜನತೆ ಪ್ರತಿಭಟನೆ ನಡೆಸಿ, ರಾಜೀನಾಮೆ ಹಿಂಪಡೆಯುವಂತೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ರಾಜೀನಾಮೆಗೆ ಕಾರಣಗಳನ್ನು ನೀಡಿರುವ ಅತೃಪ್ತರು, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಹಸ್ತಕ್ಷೇಪವೇ ಮುಖ್ಯ ಕಾರಣವಾಯಿತು. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದರೂ ಯಾವುದೆ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮೈತ್ರಿ ಸರಕಾರದ ಕಾರ್ಯವೈಖರಿ ಸರಿಯಿರಲಿಲ್ಲ. ಕಾಂಗ್ರೆಸ್ ಶಾಸಕರ ಪತ್ರಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಚೇರಿಯಿಂದ ಸಕರಾತ್ಮಕವಾದ ಯಾವುದೆ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಈ ಬಗ್ಗೆ ಪಕ್ಷದ ಅಧ್ಯಕ್ಷ, ಸಮನ್ವಯ ಸಮಿತಿಯ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದೆವು. ಅವರಿಂದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾದ ಪ್ರಸಂಗ ಬಂದಿದೆ.

ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜಕೀಯ ಹಸ್ತಕ್ಷೇಪವು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಉಂಟು ಮಾಡಿತು. ಕಳೆದ ಒಂದು ವರ್ಷದಿಂದ ಇದೆಲ್ಲವನ್ನು ಸಹಿಸಿಕೊಂಡು ಬಂದೆವು. ಅದರೆ, ಇದು ಮಿತಿ ಮೀರಿದ ಹಂತ ತಲುಪಿದಾಗ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಯಿತು ಎಂದು ಅತೃಪ್ತ ಶಾಸಕರು ವಾಟ್ಸಾಪ್ ಮೂಲಕ ತಮ್ಮ ಕ್ಷೇತ್ರದ ಜನತೆಗೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News