ಮುಖ್ಯಮಂತ್ರಿ ಬಹುಮತ ಸಾಬೀತುಪಡಿಸುವ ನಾಟಕ ಬಿಡಲಿ: ಎಂ.ಪಿ.ರೇಣುಕಾಚಾರ್ಯ

Update: 2019-07-14 16:18 GMT

ಬೆಂಗಳೂರು, ಜು.14: ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವ ನಾಟಕವಾಡುವ ಬದಲಿಗೆ ರಾಜೀನಾಮೆ ನೀಡಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ರವಿವಾರ ಯಲಹಂಕದ ಬಳಿಯ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡಿರುವ 16 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಸ್ಸು ಪಡೆದಿದ್ದು, ಸರಕಾರ ಈಗ ಬಹುಮತ ಕಳೆದುಕೊಂಡಿದೆ. ಹೀಗಾಗಿ, ಅವರು ವಿಶ್ವಾಸ ಮತಯಾಚನೆ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಶಾಸಕರು ಸಣ್ಣ ಮಕ್ಕಳಲ್ಲ, ಅವರ ಮನವೊಲಿಸುತ್ತೇವೆ ಎನ್ನುವುದು ಮುಗಿದ ಅಧ್ಯಾಯ. ಹೀಗಾಗಿ, ಸಿಎಂ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು ಎಂದ ಅವರು, ತಕ್ಷಣವೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಮೂಲಕ ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ನಾವು ಸ್ವಯಂ ಪ್ರೇರಿತವಾಗಿ ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಸ್ಪೀಕರ್‌ಗೆ ನೀಡಿರುವ ಪತ್ರದಲ್ಲಿ ಹಾಗೂ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡಿವೆಟ್‌ನಲ್ಲಿ ಮನವಿ ಮಾಡಿದ್ದಾರೆ. ಹೀಗಿದ್ದರೂ, ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕರಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಸ್ಪೀಕರ್ ಮೇಲೆ ನಮಗೆ ಅಪಾರವಾದ ಗೌರವವಿದೆ. ಅವರು ತಮ್ಮ ಸ್ಥಾನದ ಗೌರವವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.

ಸಚಿವ ಎಚ್.ಡಿ.ರೇವಣ್ಣ ಎಂತಹ ಸರ್ಕಸ್ ಮಾಡಿದರೂ ಸರಕಾರವನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಹೋದರೂ, ಒಂದು ಡಜನ್ ನಿಂಬೆಹಣ್ಣು ಹಿಡಿದುಕೊಂಡು ಹೋದರೂ ಸಮ್ಮಿಶ್ರ ಸಮ್ಮಿಶ್ರ ಸರಕಾರ ಅಸ್ಥಿರವಾಗುವುದು ನಿಶ್ಚಿತ. ಅದನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News