​ಇ-ಸಂಚಾರ ಕ್ರಾಂತಿ: ದೇಶದಲ್ಲಿ 4 ಲಕ್ಷ ದಾಟಿದ ಎಲೆಕ್ಟ್ರಿಕ್ ವಾಹನ

Update: 2019-07-15 03:55 GMT

ಹೊಸದಿಲ್ಲಿ: ದೇಶದಲ್ಲಿ ಪ್ರಸ್ತುತ ನಾಲ್ಕು ಲಕ್ಷ ಎಲೆಕ್ಟ್ರಿಕ್ ಅಥವಾ ಬ್ಯಾಟರಿ ಚಾಲಿತ ವಾಹನಗಳು ನೋಂದಣಿಯಾಗಿದ್ದು, ಈ ಪೈಕಿ ಅರ್ಧದಷ್ಟು ವಾಹನಗಳು ದೆಹಲಿ ಮತ್ತು ಉತ್ತರ ಪ್ರದೇಶದಲ್ಲೇ ಇವೆ ಎನ್ನುವ ಅಂಶ ರಸ್ತೆ ಸಾರಿಗೆ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಎಲೆಕ್ಟ್ರಿಕ್ ವಾಹನಗಳ ಪೈಕಿ ಇ-ರಿಕ್ಷಾ ಹಾಗೂ ಇ-ಕಾರ್ಟ್‌ಗಳು ಅತ್ಯಧಿಕ ಸಂಖ್ಯೆಯಲ್ಲಿವೆ. ಇವುಗಳನ್ನು ಮೋಟಾರು ವಾಹನಗಳು ಎಂದು ಪರಿಗಣಿಸುವ ಸಂಬಂಧ 2015ರ ಮಾರ್ಚ್‌ನಲ್ಲಿ ಸಂಸತ್ತು ಕಾನೂನು ಆಂಗೀಕರಿಸಿತ್ತು.

ಉತ್ತರ ಪ್ರದೇಶದಲ್ಲಿ 1.39 ಲಕ್ಷ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿದ್ದು, ಅತಿಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ ರಾಜ್ಯ ಎನಿಸಿಕೊಂಡಿದೆ. 75,600 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ಇ-ವಾಹನಗಳ ನೋಂದಣಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಅಸ್ಸಾಂನಲ್ಲಿ 15,192 ಎಲೆಕ್ಟ್ರಿಕ್ ವಾಹನಗಳಿದ್ದು, ಈಶಾನ್ಯ ರಾಜ್ಯಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಾಸ್ತವವಾಗಿ ಅಧಿಕೃತ ಸಂಖ್ಯೆಗಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇರಬಹುದು ಎಂದು ಉನ್ನತ ಮೂಲಗಳು ಹೇಳಿವೆ. 2016ರ ಆಗಸ್ಟ್‌ನಲ್ಲಿ ಸಚಿವಾಲಯ ಅಧಿಸೂಚನೆ ಹೊರಡಿಸಿ ಇ-ರಿಕ್ಷಾಗಳಿಗೆ, ಇ-ಕಾರ್ಟ್‌ಗಳಿಗೆ ನೋಂದಣಿಯಿಂದ ವಿನಾಯಿತಿ ನೀಡಿರುವುದರಿಂದ ದೇಶದಲ್ಲಿ ಸಾವಿರಾರು ಇ-ರಿಕ್ಷಾಗಳು ನೋಂದಣಿ ಮಾಡಿಸಿಕೊಳ್ಳದೇ ಕಾರ್ಯಾಚರಣೆಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News