ಮುಸ್ಲಿಮರಲ್ಲಿ ‘ಮೃಗೀಯ ಪ್ರವೃತ್ತಿ’ಯಿದೆ ಎಂದ ಬಿಜೆಪಿ ಶಾಸಕ

Update: 2019-07-15 10:31 GMT

ಹೊಸದಿಲ್ಲಿ, ಜು.15: ಮುಸ್ಲಿಂ ಪುರುಷರು ‘ಮೃಗೀಯ ಪ್ರವೃತ್ತಿ’ ತೋರಿಸುತ್ತಾರೆಂದು ಹೇಳುವ ಮೂಲಕ ಬಿಜೆಪಿ ನಾಯಕ ಸುರೇಂದ್ರ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ.

“ಮುಸ್ಲಿಮರು 50 ಪತ್ನಿಯರನ್ನು ಹೊಂದಿ 1,050 ಮಕ್ಕಳನ್ನೂ ಪಡೆಯುತ್ತಾರೆ. ಇದು ಸಂಪ್ರದಾಯವಲ್ಲ, ಬದಲು ಮೃಗೀಯ  ಪ್ರವೃತ್ತಿ'' ಎಂದು ಬಲ್ಲಿಯಾ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಹೇಳಿದ್ದಾರೆ. ಅವರು ಈ ಹೇಳಿಕೆ ನೀಡುವ ಸಂದರ್ಭದ ವೀಡಿಯೋದಲ್ಲಿ ಸುತ್ತಲಿದ್ದವರು ನಗುತ್ತಿರುವುದೂ ಕೇಳಿಸುತ್ತದೆ.

ಈ ಹಿಂದೆ ಕೂಡ ಹಲವಾರು ವಿವಾದಾತ್ಮಕ ಹೇಳಿಕೆ ನೀಡಿರುವ ಇತಿಹಾಸ ಸಿಂಗ್ ಅವರಿಗಿದೆ. ಮಾರ್ಚ್ ತಿಂಗಳಲ್ಲಿ ಸಿನೆಮಾ ಕಲಾವಿದೆ ಸಪ್ನಾ ಚೌಧುರಿ ಕಾಂಗ್ರೆಸ್ ಪಕ್ಷ ಸೇರುತ್ತಾರೆಂಬ ಸುದ್ದಿಯ ನಡುವೆ ಪ್ರತಿಕಿಯಿಸಿದ್ದ ಅವರು, “ರಾಹುಲ್ ತಾಯಿ ಕೂಡ ಇಟಲಿಯಲ್ಲಿ ಅದೇ ವೃತ್ತಿಯಲ್ಲಿದ್ದರು ಹಾಗೂ ಅವರ ತಂದೆ ಆಕೆಯನ್ನು ತಮ್ಮವರಾಗಿಸಿದ್ದರು. ಅವರು (ರಾಹುಲ್ ಗಾಂಧಿ) ಕೂಡ  ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿ ಸಪ್ನಾರನ್ನು ತಮ್ಮವರಾಗಿಸಬೇಕು”' ಎಂದು ಹೇಳಿ ವಿವಾದಕ್ಕೀಡಾಗಿದ್ದರು.

ಇದಕ್ಕೂ ಮೊದಲು ಅವರು ರಾಹುಲ್ ಹಾಗೂ ಪ್ರಿಯಾಂಕರನ್ನು ರಾವಣ ಹಾಗೂ ಶೂರ್ಪನಖಿಗೆ ಹೋಲಿಸಿದ್ದರು.

ಲೋಕಸಭಾ ಚುನಾವಣೆಗಾಗಿ ಮಾಯಾವತಿಯ ಪಕ್ಷ ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿದ್ದನ್ನೂ ಟೀಕಿಸಿದ್ದ ಅವರು ತನ್ನ ಮೇಲೆ ದಾಳಿಗೈದವರನ್ನು ಆಲಂಗಿಸಿ ಮಾಯಾವತಿ ಮಹಿಳೆಯ ಘನತೆಯನ್ನು ಕೊಂದಿದ್ದಾರೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News