'ಗುಂಪು ಹತ್ಯೆ' ವಿರೋಧಿಸಿ ಜು.15ರಿಂದ ಪಿಎಫ್‌ಐ ರಾಷ್ಟ್ರೀಯ ಅಭಿಯಾನ

Update: 2019-07-15 14:44 GMT

ಬೆಂಗಳೂರು, ಜು.15: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವು ಇಂದು ಲಿಂಚಿಸ್ಥಾನದ ಗಣರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿ, ಧಾರ್ಮಿಕ ಮತ್ತು ಜಾತಿ ತಾರತಮ್ಯದಿಂದ ಮುಗ್ಧ ಜನರನ್ನು ಅಟ್ಟಾಡಿಸಿಕೊಂಡು ಬರ್ಬರವಾಗಿ ಗುಂಪು ಹತ್ಯೆ ಮಾಡುತ್ತಿರುವುದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜು.15ರಿಂದ ಆ.31ರವರೆಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫ್ರಂಟ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷಾ, ಗೋ ಮಾಂಸ ಸೇವಿಸಿದರು, ಗೋವನ್ನು ಕೊಂದಿದ್ದರು ಎಂಬ ಕ್ಷುಲ್ಲಕ ಆರೋಪದ ಮೇಲೆ ದೇಶದಾದ್ಯಂತ ಗುಂಪು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ 180 ಗಂಭೀರ ಹಾಗೂ 33 ಸಾಮಾನ್ಯ ಗುಂಪು ಹಲ್ಲೆ ಪ್ರಕರಣಗಳು ನಡೆದಿದ್ದು, ಅಮಾಯಕರ ಪ್ರಾಣ ರಕ್ಷಣೆಯನ್ನು ಮಾಡುವಲ್ಲಿ ಕೇಂದ್ರ ಸರಕಾರ ಮೌನವಹಿಸಿದೆ. ಹೀಗಾಗಿ ನಾವು ಅಭಿಯಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಆಡಳಿತದ 2ನೇ ಅವಧಿಯಲ್ಲಿ ಈ ಗುಂಪು ಹತ್ಯೆಯು ಮತ್ತಷ್ಟು ಬರ್ಬರತೆಯನ್ನು ತಾಳಿದೆ. ಬುಡಕಟ್ಟು ರಾಜ್ಯವಾಗಿರುವ ಜಾರ್ಖಂಡ್ ಗುಂಪು ಹತ್ಯೆಗೆ ಖ್ಯಾತಿ ಪಡೆದಿದೆ. ಅಲೀಮುದ್ಧೀನ್ ಅನ್ಸಾರಿಯಿಂದ ಹಿಡಿದು ಇತ್ತೀಚೆಗೆ ತಬ್ರೇಝ್ ಅನ್ಸಾರಿಯ ಹತ್ಯೆಯವರೆಗೂ ಅದರ ಪಟ್ಟಿ ಮುಂದುವರೆದಿದೆ. ತಬ್ರೇಝ್ ಅನ್ಸಾರಿಯನ್ನು ಕಟ್ಟಿಹಾಕಿ ಹಲವು ತಾಸುಗಳ ಕಾಲ ಬರ್ಬರವಾಗಿ ಚಿತ್ರಹಿಂಸೆ ನೀಡಿ ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಹೇಳುವಂತೆ ಬಲವಂತ ಪಡಿಸಿರುವುದು ದೇಶದ ಜನತೆಯನ್ನು ಉಸಿರುಗಟ್ಟಿಸುವಂತಹ ಪ್ರಕರಣ ಎಂದು ವಿಷಾದಿಸಿದರು.

ಇನ್ನು, ಪಾರ್ಲಿಮೆಂಟಿನಲ್ಲಿ ಮುಸ್ಲಿಂ ಸಂಸದರೊಬ್ಬರು ಪ್ರಮಾಣವಚನ ಸ್ವೀಕರಿಸುವಾಗ ಮೊಳಗಿದ್ದ ಜೈ ಶ್ರೀ ರಾಮ್ ಘೋಷಣೆಯಿಂದ ಪ್ರೇರಣೆಗೊಂಡು ಇಂತಹ ಪ್ರಕರಣಗಳು ನಡೆಯುತ್ತಿವೆ. ಇದು ದೇಶದ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ಸಮುದಾಯಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದು ಆತಂಕಪಟ್ಟರು.

ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆ, ಕಾರ್ನರ್ ಮೀಟಿಂಗ್, ಬೀದಿ ನಾಟಕ, ಭಿತ್ತಿ ಪತ್ರ, ಕರ ಪತ್ರ ವಿತರಣೆ, ಸೆಮಿನಾರ್ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕಾರ್ಯಕ್ರಮಗಳಿಗೆ ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಫ್ರಂಟ್‌ನ ರಾಜ್ಯ ಸಮಿತಿ ಸದಸ್ಯ ಶಾಪಿ ಬೆಳ್ಳಾರೆ ಹಾಗೂ ರಾಜ್ಯ ಸಮಿತಿ ಸದಸ್ಯ ಫಾರೂಕ್ ರಾಮನಗರ ಉಪಸ್ಥಿತರಿದ್ದರು.

50 ಮಂದಿಯನ್ನು ಹಾಡುಹಗಲೇ ಹತ್ಯೆ ಮಾಡಲಾಗಿದೆ. ಕೆಲವರನ್ನು ಅತ್ಯಂತ ಬರ್ಬರವಾಗಿ ಜೀವಂತ ದಹಿಸಲಾಗಿದೆ. ಗುಂಪು ಹತ್ಯೆಗೆ ಒಳಗಾದವರಲ್ಲಿ ಶೇ.56ರಷ್ಟು ಬಡ ಮುಸ್ಲಿಮರು ಹಾಗೂ ಶೇ.44ರಷ್ಟು ಹಿಂದುಳಿದ ಜಾತಿಯವರಾಗಿದ್ದಾರೆ.

-ಅಬ್ದುಲ್ ರಜಾಕ್ ಕೆಮ್ಮಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ

ಅಭಿಯಾನದ ಘೋಷ ವಾಕ್ಯ

ಫ್ಯಾಶಿಸ್ಟ್ ಶಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಪ್ರತಿರೋಧಿಸಿ ದೇಶದ ಜನರ ಮನಸ್ಸಿನಲ್ಲಿ ನಿರ್ಭಯತ್ವ ಮತ್ತು ಸ್ವಾಭಿಮಾನವನ್ನು ಸೃಷ್ಟಿ ಮಾಡಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ‘ನಿರ್ಭೀತಿಯಿಂದ ಜೀವಿಸಿ, ಘನತೆಯಿಂದ ಜೀವಿಸಿ’ ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News