ಕೆ.ಸಿ.ವ್ಯಾಲಿ ಯೋಜನೆಗೆ 40 ಎಂಎಲ್‌ಡಿ ಹೆಚ್ಚುವರಿ ನೀರು: ಸಚಿವ ಕೃಷ್ಣಭೈರೇಗೌಡ

Update: 2019-07-15 16:21 GMT

ಬೆಂಗಳೂರು, ಜು. 15: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ನಡೆಸಿದ ಚರ್ಚೆಗಳ ಫಲವಾಗಿ ಈಗ ಕೆ.ಸಿ.ವ್ಯಾಲಿ ಯೋಜನೆಯಲ್ಲಿ 40 ಎಂಎಲ್‌ಡಿ ನೀರು ಹೆಚ್ಚುವರಿ ಆಗಿ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮಿಜೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಈ ಹಿಂದೆ 250 ಎಂಎಲ್‌ಡಿ ನೀರನ್ನು ಪಂಪ್ ಮಾಡಲಾಗುತ್ತಿತ್ತು. ಈಗ 290 ಎಂಎಲ್‌ಡಿ ನೀರು ಪಂಪ್ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಪಂಪ್ ಮಾಡಲಾಗುತ್ತಿರುವ ನೀರಿನಲ್ಲಿ 10 ಎಂಎಲ್‌ಡಿ ನೀರನ್ನು ಹೊಸಕೋಟೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಬಿಡಲಾಗಿದೆ.

20 ಎಂಎಲ್‌ಡಿ ನೀರನ್ನು ಮಾಲೂರಿನ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಬಿಡಲಾಗಿದೆ. ಈ ಎರಡೂ ಮಾರ್ಗಗಳಿಗೆ ನೀರು ಸರಬರಾಜು ಆರಂಭವಾಗಿದ್ದು, ಮುಖ್ಯ ಸರಣಿಯಲ್ಲಿ (ನರಸಾಪುರ-ಎಸ್.ಅಗ್ರಹಾರ-ಜನಘಟ್ಟ-ಬಂಗಾರಪೇಟೆ) 10 ಎಂಎಲ್‌ಡಿಹೆಚ್ಚುವರಿ ನೀರು ಹರಿಸಲಾಗುತ್ತಿದೆ.

ಅಲ್ಲದೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಮುಂದಿನ 10 ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರನ್ನು ಬೆಂಗಳೂರಿನಿಂದ ಪಂಪ್ ಮಾಡುವುದಾಗಿ ತಿಳಿಸಿರುತ್ತಾರೆ. ಇದರಿಂದಾಗಿ ಮುಖ್ಯಮಾರ್ಗದಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮಾಲೂರು ಮಾರ್ಗದ ಬಳಕೆಗೂ 10ದಿನಗಳ ನಂತರ ಇನ್ನೂ ಹೆಚ್ಚು ನೀರನ್ನು ಹರಿಬಿಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News