ಮಳೆಯ ಅಭಾವ; ಬೆಲೆ ಏರಿಕೆಯ ಭೀತಿ

Update: 2019-07-16 06:52 GMT

ಕರ್ನಾಟಕವನ್ನು ರಾಜಕೀಯ ಬಿಕ್ಕಟ್ಟಿನ ಸುಳಿಗೆ ಸಿಲುಕಿಸಿದ ರಾಜಕಾರಣಿಗಳು ತಮ್ಮನ್ನು ಚುನಾಯಿಸಿದ ಜನತೆಯ ಜ್ವಲಂತ ಸಮಸ್ಯೆಗಳನ್ನು ಮರೆತಿದ್ದಾರೆ. ರಾಜ್ಯದ ಬಹುತೇಕ ಪ್ರದೇಶ ಬರದ ದವಡೆಗೆ ಸಿಲುಕಿದೆ. ಮುಂಗಾರು ಮಳೆ ತಡವಾಗಿ ಆರಂಭವಾದರೂ ವಾಡಿಕೆಯಂತೆ ಮಳೆಯಾಗುತ್ತಿಲ್ಲ. ಇಂತಹ ಸಂಕಟದ ಸನ್ನಿವೇಶದಲ್ಲಿ ಜನರ ನೆರವಿಗೆ ಧಾವಿಸಬೇಕಾದ ಜನ ಪ್ರತಿನಿಧಿಗಳಲ್ಲಿ ಕೆಲವರು ಮುಂಬೈನ ಪಂಚತಾರಾ ಹೊಟೇಲ್‌ಗಳಲ್ಲಿ ಮಜಾ ಮಾಡುತ್ತಿದ್ದಾರೆ. ಇನ್ನುಳಿದವರು ಬೆಂಗಳೂರು ಸುತ್ತಮುತ್ತಲಿನ ರೆಸಾರ್ಟ್‌ಗಳನ್ನು ಸೇರಿದ್ದಾರೆ. ಬರಪರಿಹಾರ ಕಾರ್ಯಗಳು ತಮ್ಮ ಪಾಡಿಗೆ ತಾವು ಬೇಕಾಬಿಟ್ಟಿಯಾಗಿ ನಡೆದಿವೆ. ಜನಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಸರಕಾರಿ ಅಧಿಕಾರಿಗಳೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಮೂರು ವರ್ಷಗಳಿಂದಲೂ ಸರಿಯಾಗಿ ಮಳೆಯಾಗಿಲ್ಲ. ಈ ವರ್ಷವೂ ಪರಿಸ್ಥಿತಿ ಆತಂಕಕಾರಿಯಾಗಿದೆ. ದೇಶಾದ್ಯಂತ ಮಳೆಯ ಕೊರತೆ ಶೇ. 21ರಷ್ಟಿದೆ. ಕರ್ನಾಟಕದ ಪರಿಸ್ಥಿತಿ ಅದಕ್ಕಿಂತ ಕಳವಳಕಾರಿಯಾಗಿದೆ.ರಾಷ್ಟ್ರೀಯ ಸರಾಸರಿಗಿಂತ ಇಲ್ಲಿ ಮಳೆಯ ಕೊರತೆ ಹೆಚ್ಚಿದೆ. ಕರ್ನಾಟಕದಲ್ಲಿ ಶೇ. 25ರಷ್ಟು ಮಳೆಯ ಕೊರತೆಯಿದೆ ಎಂದು ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಆದರೆ ಹಳೆಯ ಮೈಸೂರು, ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ತೀವ್ರವಾದ ಮಳೆಯ ಕೊರತೆ ಉಂಟಾಗಿದೆ.

ಈ ಬಾರಿ ಮುಂಗಾರು ತುಂಬಾ ತಡವಾಗಿ ಆರಂಭವಾಯಿತು. ಆರಂಭವಾದರೂ ನೆಲ ಹಸಿಯಾಗುವಷ್ಟು ಮಳೆಯೂ ಬರಲಿಲ್ಲ. ಹೀಗಾಗಿ ಬಿತ್ತನೆ ಚಟುವಟಿಕೆಗಳು ಕುಂಠಿತ ಗೊಂಡಿವೆ. ಹೈದರಾಬಾದ್ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಶೇ. 3.50 ಪ್ರದೇಶದಲ್ಲಿ ಬಿತ್ತನೆ ಹಾಳಾಗಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

ರೈತರು ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ, ಮಳೆ ಬರಲೆಂದು ಅನೇಕ ಕಡೆ ಗೊಂಬೆ ಮದುವೆ, ಕಪ್ಪೆಗಳ ಮದುವೆಗಳನ್ನು ಮಾಡಿ ಆಸೆಗಣ್ಣುಗಳಿಂದ ಆಗಸ ದಿಟ್ಟಿಸುತ್ತಿದ್ದಾರೆ. ಹೆಸರು, ಉದ್ದು, ಸೋಯಾ, ಎಳ್ಳು ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಾಗಿ ಬಿತ್ತನೆಗೆ ಮುಂದಾದ ರೈತರು ಮಳೆಯಿಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ. ಶೇ. 40 ಭಾಗದಲ್ಲಿ ಮಾತ್ರ ಬಿತ್ತನೆಯಾಗಿದೆ.

ಹೈದರಾಬಾದ್ ಕರ್ನಾಟಕದ ಹಾಗೂ ಹಳೆಯ ಮೈಸೂರಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಸರಕಾರವೇನೋ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಆದರೆ ಈಗಿನ ಜನಸಂಖ್ಯಾ ಪ್ರಮಾಣಕ್ಕೆ ಈ ನೀರು ಯಾವುದಕ್ಕೂ ಸಾಲುವುದಿಲ್ಲ. ಕಲಬುರಗಿ, ರಾಯಚೂರಿನಂತಹ ನಗರಗಳಲ್ಲೂ ನೀರಿನ ತೀವ್ರ ಕೊರತೆ ಉಂಟಾಗಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಜುಲೈ ಮೊದಲ ವಾರದಲ್ಲಿ ಶೇ. 60ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಈಗ ಕೇವಲ ಶೇ. 25ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 45ರಷ್ಟು ಬಿತ್ತನೆಯಾಗಿತ್ತು. ಹೀಗಾಗಿ ಪರಿಸ್ಥಿತಿ ಕಳವಳಕಾರಿಯಾಗಿದೆ.
ಮಳೆಯ ಕೊರತೆಯಿಂದಾಗಿ ದೇಶಾದ್ಯಂತ ಬಿತ್ತನೆ ಕಾರ್ಯ ಕುಂಠಿತವಾಗಿರುವು ದರಿಂದ ಈ ವರ್ಷ ಆಹಾರ ಧಾನ್ಯಗಳ, ತರಕಾರಿ, ಹಣ್ಣು ಹಂಪಲುಗಳ ಕೊರತೆ ಉಂಟಾಗುವ ಮತ್ತು ಅವುಗಳ ಬೆಲೆ ಗಗನಕ್ಕೇರುವ ಆತಂಕದ ಪರಿಸ್ಥಿತಿ ಎದುರಾಗಿದೆ. ಹಸಿರು ಕ್ರಾಂತಿಯ ನಂತರ ಭಾರತದಲ್ಲಿ ಸಾಕಷ್ಟು ಆಹಾರ ಧಾನ್ಯ ಉತ್ಪಾದನೆಯಾಗುತ್ತಿದೆ. ಈಗ ವಿದೇಶಕ್ಕೆ ರಫ್ತು ಮಾಡುವಷ್ಟು ಉತ್ಪಾದನಾ ಪ್ರಮಾಣ ಹೆಚ್ಚಾಗಿದೆ. ಆದರೆ ಬೇಳೆ ಕಾಳುಗಳ ಉತ್ಪಾದನೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಆಗಿಲ್ಲ. ಜನಸಾಮಾನ್ಯರ ಪಾಲಿಗೆ ತೊಗರಿ, ಉದ್ದಿನ ಬೇಳೆಗಳೇ ಪೌಷ್ಟಿಕಾಂಶ ಒದಗಿಸುವ ಆಹಾರ ಸಾಮಗ್ರಿಗಳು. ಇವು ಬಡವರ ಆಹಾರದಲ್ಲಿ ಪ್ರತಿನಿತ್ಯ ಬಳಕೆಯಾದರೆ ಮಾತ್ರ ಮಕ್ಕಳ ಪೌಷ್ಟಿಕಾಂಶದ ಕೊರತೆ ನಿವಾರಣೆಯಾಗುತ್ತದೆ. ಆದರೆ ತೊಗರಿ, ಉದ್ದಿನ ಬೇಳೆಯ ಬೆಲೆ ಕೆ.ಜಿ.ಗೆ 100 ರೂಪಾಯಿ ಆಗಿದೆ. ಇವುಗಳ ಬಿತ್ತನೆ ಕೂಡ ಕಡಿಮೆಯಾಗಿದೆ. ಈ ಬಾರಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

ಸರಕಾರ ತಕ್ಷಣ ಬೇಳೆಕಾಳುಗಳ ಸಂಗ್ರಹ ಕಾರ್ಯ ಕೈಗೊಳ್ಳಬೇಕು. ಇಲ್ಲವಾದರೆ ಖಾಸಗಿ ದಾಸ್ತಾನುದಾರರು, ವ್ಯಾಪಾರಿಗಳು ಬೇಳೆಕಾಳುಗಳನ್ನು ಸಂಗ್ರಹಿಸಿಟ್ಟುಕೊಂಡು ಕೃತಕವಾಗಿ ಅಭಾವ ಪರಿಸ್ಥಿತಿ ಉಂಟು ಮಾಡಿ ಬೆಲೆ ಏರಿಸಿ ಲಾಭ ಮಾಡಿಕೊಳ್ಳುತ್ತಾರೆ.
ದೇಶದ ಅನೇಕ ಭಾಗಗಳಲ್ಲಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಹೀಗಾಗಿ ಈ ವರ್ಷ ಆಹಾರ ಧಾನ್ಯದ ಕೊರತೆ ಹಾಗೂ ಬೆಲೆ ಏರಿಕೆಗಳು ಜನ ಸಾಮಾನ್ಯರನ್ನು ಅತಿಯಾಗಿ ಬಾಧಿಸಲಿವೆ. ಆದ್ದರಿಂದ ಸರಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಿರಿವಂತ ವ್ಯಾಪಾರಿಗಳು ಆಹಾರ ಸಾಮಗ್ರಿಗಳ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವವನ್ನು ಉಂಟುಮಾಡಿ ಲಾಭ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಆದ್ದರಿಂದ ಸರಕಾರ ಆಹಾರ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕಾಗಿದೆ.

  ವ್ಯಾಪಾರಿಗಳು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಉಂಟು ಮಾಡದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಪರಿಣಾಮವಾಗಿ ಜೀವನಾವಶ್ಯಕ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿದೆ.ಈಗ ಮಳೆಯ ಕೊರತೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಂಭವವಿದೆ.

ಸರಕಾರ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು. ಆಹಾರ ಧಾನ್ಯಗಳು ಹಾಗೂ ಬೇಳೆಕಾಳುಗಳನ್ನು ಸರಕಾರವೇ ಸಂಗ್ರಹ ಮಾಡಿ ನ್ಯಾಯ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಸಿಗುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News