ಉತ್ತರ ಪ್ರದೇಶ ಶಾಲೆಯಲ್ಲಿ 51 ವಿದ್ಯಾರ್ಥಿಗಳಿಗೆ ವಿದ್ಯುತ್ ಶಾಕ್!

Update: 2019-07-16 03:41 GMT

ಲಕ್ನೋ, ಜು.16: ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ 51 ವಿದ್ಯಾರ್ಥಿಗಳು ವಿದ್ಯುತ್ ಆಘಾತಕ್ಕೊಳಗಾದ ಘಟನೆ ನಡೆದಿದೆ. ಹೈಟೆನ್ಷನ್ ತಂತಿ, ಶಾಲೆಯ ಆವರಣದ ಮರಕ್ಕೆ ಸಂಪರ್ಕ ಹೊಂದಿದ ಪರಿಣಾಮ ವಿದ್ಯಾರ್ಥಿಗಳಿಗೆ ಶಾಕ್ ಹೊಡೆಯಿತು ಎನ್ನಲಾಗಿದೆ. ಗಾಯಾಳು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳು ಚಪ್ಪಲಿ ತೆಗೆದು ನೆಲದ ಮೇಲೆ ಗೋಣಿ ಚೀಲಗಳಲ್ಲಿ ಕುಳಿತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಶಾಲೆಯ ಆವರಣದ ಮರಗಳ ನಡುವೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ಮರದ ಜತೆ ಸಂಪರ್ಕಕ್ಕೀಡಾದದ್ದು ಈ ಘಟನೆಗೆ ಕಾರಣ. ನೆಲದಲ್ಲಿ ತೇವಾಂಶ ಇದ್ದ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇದ್ದ ಶಾಲಾ ಕಟ್ಟಡದಲ್ಲಿ ನೆಲದಲ್ಲಿ ಕುಳಿತಿದ್ದ ಮಕ್ಕಳಿಗೆ ಶಾಕ್ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

60 ಮಕ್ಕಳು ಏಕಕಾಲಕ್ಕೆ ಕಿರುಚಾಡಿದ ಭಯಾನಕ ಕ್ಷಣವನ್ನು ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ. ಆ ಜಾಗದಲ್ಲಿ ಬರಿಗಾಲಲ್ಲಿ ಓಡಾಡಲೂ ಸಾಧ್ಯವಾಗದೇ ಮೂರ್ಛೆ ತಪ್ಪಿಬಿದ್ದರು. ಆದರೆ ಚಪ್ಪಲಿ ಇದ್ದ ಕಾರಣದಿಂದಾಗಿ ಶಿಕ್ಷಕರಿಗೆ ಯಾವುದೇ ತೊಂದರೆಯಾಗಿರಲಿಲ್ಲ.

51 ಮಕ್ಕಳು ಗಾಯಗೊಂಡ ಘಟನೆ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್ ಕ್ರಮಕ್ಕೆ ಆದೇಶಿಸಿದ್ದಾರೆ. 29 ವಿದ್ಯಾರ್ಥಿಗಳಿಗೆ ಉಟ್ರಾಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 22 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಕರುಣೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News