ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿದರೂ ಮೈತ್ರಿ ಸರಕಾರ ಉಳಿಯದು: ಬಿಜೆಪಿ

Update: 2019-07-16 14:55 GMT

ಬೆಂಗಳೂರು, ಜು. 16: ಶಾಸಕರ ರಾಜೀನಾಮೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿದರೂ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಹೊರವಲಯದಲ್ಲಿನ ರೆಸಾರ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಾಸಕ ಸಿ.ಟಿ.ರವಿ, ಸುಪ್ರೀಂ ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪು ಏನೇ ಇರಲಿ. ಈ ಸರಕಾರ ಉರುಳುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ವಕೀಲರ ವಾದ-ಪ್ರತಿವಾದ ಸರಕಾರವನ್ನು ಕಾಪಾಡುವುದಿಲ್ಲ. ಜನರ ವಿಶ್ವಾಸ ಕಳೆದುಕೊಂಡಿರುವ ಮೈತ್ರಿ ಸರಕಾರ ಗುರುವಾರ ಸಂಜೆ ಇತಿಹಾಸ ಸೇರುತ್ತದೆ. ಕಾಂಗ್ರೆಸ್ ಈಗಾಗಲೇ ವಿಪಕ್ಷ ಸ್ಥಾನದಲ್ಲಿ ಕೂರಲು ಮಾನಸಿಕವಾಗಿ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದರು.

ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಮಾತನಾಡಿ, ರಾಜ್ಯದ ಜನತೆ ಸುಪ್ರೀಂ ಕೋರ್ಟ್ ವಿಚಾರಣೆ ಆಲಿಸಿದ್ದಾರೆ. ಶಾಸಕರ ಮೂಲಭೂತ ಹಕ್ಕನ್ನು ಪ್ರತಿಬಂಧಿಸುವ ಹಕ್ಕು ಯಾರಿಗೂ ಇಲ್ಲ. ಶಾಸಕರ ರಾಜೀನಾಮೆ ಹಿಂದೆ ಸ್ವ ಇಚ್ಛೆ ಇದೆಯೋ ಇಲ್ಲವೋ ಅಥವಾ ನೈಜತೆ ಇದೆಯಾ ಎನ್ನುವುದನ್ನಷ್ಟೇ ಪರಿಶೀಲಿಸಲು ಸ್ಪೀಕರ್ ಅಧಿಕಾರ ಹೊಂದಿದ್ದಾರೆ. ಹೀಗಾಗಿ ಸ್ಪೀಕರ್ ಅವರು ಬೇರೆ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಕೋಟ್ಯಂತರ ಜನರ ಆಸೆಯಂತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬರುತ್ತದೆ. ನಾಳೆ ಸುಪ್ರೀಂ ಕೋರ್ಟ್ ಇದಕ್ಕೆ ಪೂರಕವಾದ ತೀರ್ಪು ಬರಲಿದೆ ಎಂದು ಅವರು ಹೇಳಿದರು.

ಮೇಲ್ಮನೆ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಪಕ್ಷದ 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಸ್ಪೀಕರ್ ಅವರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು. ಸುಪ್ರೀಂ ಕೋರ್ಟ್ ನಾಳೆ ಐತಿಹಾಸಿಕ ತೀರ್ಪು ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News