ರೋಷನ್ ಬೇಗ್ ಬದಲು ಝಮೀರ್ ಅಹ್ಮದ್ ರನ್ನು ಬಂಧಿಸಿ: ಬಿಜೆಪಿ ನಾಯಕ ಈಶ್ವರಪ್ಪ ಆಗ್ರಹ

Update: 2019-07-16 15:35 GMT

ಬೆಂಗಳುರು, ಜು.16: ಐಎಂಎ ಬಹುಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ, ಮಾಜಿ ಸಚಿವ ಆರ್.ರೋಷನ್ ಬೇಗ್ ಬದಲು ಜಾರಿ ನಿರ್ದೇಶನಾಲಯ(ಈಡಿ)ದಿಂದ ನೋಟಿಸ್ ಪಡೆದಿರುವ ಸಚಿವ ಝಮೀರ್ ಅಹ್ಮದ್ ಖಾನ್‌ರನ್ನು ಬಂಧಿಸಬೇಕು ಎಂದು ಬಿಜೆಪಿ ನಾಯಕ, ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಹೊರ ವಲಯದಲ್ಲಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ಖಾಸಗಿ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ರಾಜ್ಯ ಸರಕಾರದ ಕೈಗೊಂಬೆಯಾಗಿದೆ. ಈ ಮೈತ್ರಿ ಸರಕಾರದ ವಿರುದ್ಧ ಧ್ವನಿ ಎತ್ತಿದ ರೋಷನ್‌ಬೇಗ್‌ರನ್ನು ಮಾತ್ರ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರಕ್ಕೆ ಪ್ರಾಮಾಣಿಕತೆ, ನೈತಿಕತೆ ಇದ್ದರೆ ಮೊದಲು ಝಮೀರ್ ಅಹ್ಮದ್ ಖಾನ್‌ರನ್ನು ಬಂಧಿಸಬೇಕಿತ್ತು. ರಾಜಕೀಯ ಕುತಂತ್ರಗಳನ್ನು ಮಾಡುತ್ತಿರುವ ಈ ಸರಕಾರದ ನಡೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಐಎಂಎ ಹಗರಣದ ಮುಖ್ಯ ಆರೋಪಿ ಮನ್ಸೂರ್ ಖಾನ್, ಹೂಡಿಕೆದಾರರ ಹಣ ಹಿಂದಿರುಗಿಸುತ್ತೇನೆ, ತನಗೆ ಜೀವ ಭಯ ಇರುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಆತನಿಗೆ ರಕ್ಷಣೆ ನೀಡಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಮರನ್ನು ರಕ್ಷಣೆ ಮಾಡುತ್ತೇವೆ ಎಂಬ ನೆಪ ಹೇಳಿಕೊಂಡು ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಹಾಗೂ ರಾಜ್ಯದಲ್ಲಿ ರಾಜಕೀಯ ಮಾಡಿದೆ ಎಂದು ಟೀಕಿಸಿದರು.

ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ಮಾತನಾಡಿ, ಎಸ್‌ಐಟಿಯವರು ಜು.19ರಂದು ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡಿತ್ತು. ಆದರೂ, ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಶಾಸಕ ಸ್ಥಾನಕ್ಕೆ ರೋಷನ್ ಬೇಗ್ ಸಲ್ಲಿಸಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸ್ಪೀಕರ್ ಗಮನಕ್ಕೆ ತಾರದೆ ಎಸ್‌ಐಟಿಯು ರೋಷನ್ ಬೇಗ್‌ರನ್ನು ವಶಕ್ಕೆ ಪಡೆಯುವ ಮೂಲಕ, ಶಾಸಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದೆ. ಈ ಸಂಬಂಧ ಕೂಡಲೆ ಸ್ಪೀಕರ್ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮುಖ್ಯಮಂತ್ರಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಶಾಸಕರನ್ನು ಬಂಧಿಸುವ ಮೂಲಕ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಹಿರಿಯ ಶಾಸಕರ ವಿರುದ್ಧ ಎಸ್‌ಐಟಿ ಅಸ್ತ್ರವನ್ನು ಪ್ರಯೋಗಿಸುತ್ತಿರುವ ಸರಕಾರದ ನಡೆ ಖಂಡನೀಯ ಎಂದರು.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಗುರುವಾರ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದಕ್ಕಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಈ ರಾಜ್ಯಕ್ಕೆ ಮಾದರಿಯಾಗಿರಬೇಕು. ಆದರೆ, ಅಧಿಕಾರ ಕಳೆದುಕೊಂಡು ಮನೆಗೆ ಹೋಗುವಾಗ ಜನರಿಂದ ಶಾಪ ಹಾಕಿಸಿಕೊಳ್ಳಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News