ಅಧಿಕಾರಕ್ಕಾಗಿ ಲಜ್ಜೆಗೆಟ್ಟ ರಾಜಕೀಯ: ಎಸ್‌ಯುಸಿಐ

Update: 2019-07-16 16:54 GMT

ಬೆಂಗಳೂರು, ಜು. 16: ಭೀಕರ ಸ್ವರೂಪದ ಬರ, ಕುಡಿಯುವ ನೀರಿನ ಸಮಸ್ಯೆ, ಕೃಷಿ ಬಿಕ್ಕಟ್ಟು, ಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದ ಜನವಿರೋಧಿ ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಅಧಿಕಾರಕ್ಕಾಗಿ ಲಜ್ಜೆಗೆಟ್ಟ ರಾಜಕೀಯದಲ್ಲಿ ತೊಡಗಿವೆ ಎಂದು ಎಸ್‌ಯುಸಿಐ ಆರೋಪಿಸಿದೆ.

ಜನವಿರೋಧಿ ಪಕ್ಷಗಳಿಂದ ನಿರೀಕ್ಷಿಸುವುದು ಏನೂ ಉಳಿದಿಲ್ಲ. ವ್ಯವಸ್ಥೆಯ ರಕ್ಷಕರಾಗಿರುವ ಇವರಿಂದ ಯಾವುದೇ ನಿರೀಕ್ಷೆ, ಭ್ರಮೆಗಳನ್ನು ಉಳಿಸಿಕೊಳ್ಳದೇ, ದುಡಿಯುವ ಜನತೆ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ತಮ್ಮದೇ ಜನಹೋರಾಟಕ್ಕೆ ಬೀದಿಗೆ ಇಳಿಯಬೇಕಿದೆ ಎಂದು ಎಸ್‌ಯುಸಿಐನ ಎಂ.ಎನ್.ಶ್ರೀರಾಮ್ ಕರೆ ನೀಡಿದ್ದಾರೆ.

ಒಂದು ವರ್ಷದಿಂದ ಅಧಿಕಾರದ ಗದ್ದುಗೆಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜನಪರ ಆಡಳಿತದ ಮಾತಿರಲಿ, ಒಂದು ಸರಕಾರ ಅಸ್ತಿತ್ವದಲ್ಲಿದೆಯೆನ್ನುವ ಭಾವನೆಯನ್ನು ಮೂಡಿಸುವಲ್ಲಿಯೂ ವಿಫಲವಾಗಿದೆ. ತಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಅವರು ದೂರಿದ್ದಾರೆ.

ಇನ್ನು ವಿಪಕ್ಷ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಲಜ್ಜೆಗೆಟ್ಟ ಶಾಸಕರ ಖರೀದಿಯ ಸಂತೆಯನ್ನು ಪ್ರಾರಂಭಿಸಿದ್ದರು. ಆರು ಬಾರಿ ಇಂತಹ ಪ್ರಯತ್ನಗಳನ್ನು ಮಾಡಿ ವಿಫಲವಾಗಿದ್ದರೂ, ಏಳನೆ ಬಾರಿಗೆ ಯಶಸ್ವಿಯಾಗಿ ನಿಭಾಯಿಸುವತ್ತ ದಾಪುಗಾಲು ಹಾಕಿದ್ದಾರೆ.

ಸರಕಾರದ ಒಳ ಜಗಳಕ್ಕೂ ನಮಗೂ ಸಂಬಂದವಿಲ್ಲವೆಂದು ಹೇಳುತ್ತಾ, ಅತೃಪ್ತರನ್ನು ಸೆಳೆಯುವ ಅವರ ಪ್ರಯತ್ನ ಗುಟ್ಟಾಗಿಯೇನೂ ಉಳಿದಿಲ್ಲ. ಈಗ 12 ಜನ ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಹಿಡಿದಿಟ್ಟುಕೊಂಡು ಅಧಿಕಾರದ ಕನಸು ಕಾಣುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News