ಗ್ರಾಮೀಣ ಸೇವೆ ಉಲ್ಲಂಘಿಸಿದ 589 ವೈದ್ಯರ ವಿರುದ್ಧ ಸಿವಿಲ್ ದಾವೆ: ಸಚಿವ ತುಕಾರಾಂ ಸ್ಪಷ್ಟನೆ

Update: 2019-07-16 17:50 GMT

ಮಡಿಕೇರಿ, ಜು.16 : ಸರ್ಕಾರಿ ವೈದ್ಯರುಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದರೂ, ಅದನ್ನು ಉಲ್ಲಂಘಿಸಿರುವ 589 ವೈದ್ಯರುಗಳ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲು ಸರ್ಕಾರ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಲು ನಿರ್ಧರಿಸಿದೆ. ಈ ದಾವೆ ಹೂಡಬೇಕಾದರೆ ಕಡ್ಡಾಯ ಸೇವೆಗೆ ಒಪ್ಪದ ವೈದ್ಯರುಗಳಿಗೆ ವಿಧಿಸಲಾಗುವ ದಂಡದ ಮೊತ್ತದಲ್ಲಿ ಶೇ.10 ರಷ್ಟನ್ನು ಸರ್ಕಾರವೆ ನ್ಯಾಯಾಲಯಕ್ಕೆ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಇದರ ಅಂದಾಜು ಮೊತ್ತ 8 ಕೋಟಿ ರೂ.ಗಳಿಂದ 10 ಕೊಟಿ ರೂ.ಗಳಾಗಲಿದ್ದು, ಶುಲ್ಕ ಪಾವತಿಯ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೊಡಗಿನ ಸುನಿಲ್ ಸುಬ್ರಮಣಿ ಅವರು ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವರು, ಈ ಸ್ಪಷ್ಟೀಕರಣ ನೀಡಿದ್ದಾರೆ. ಸರ್ಕಾರದ ಷರತ್ತನ್ನು ಉಲ್ಲಂಘಿಸಿ ಗ್ರಾಮೀಣ ಸೇವೆ ಮಾಡದ ವೈದ್ಯರುಗಳ ಮೇಲೆ ವಿಧಿಸಲಾಗುವ ದಂಡದ ಮೊತ್ತವನ್ನು 1 ಕೋಟಿ ರೂ.ಗಳಿಗೆ ಏರಿಕೆ ಮಾಡಬೇಕೆನ್ನುವ ಪ್ರಸ್ತಾಪವಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸುನಿಲ್ ಸುಬ್ರಮಣಿ ಅವರು ಲಿಖಿತ ರೂಪದಲ್ಲಿ ಪ್ರಶ್ನೆಯನ್ನು ಕೇಳಿದ್ದರು.

2012ರ ಕಾಯ್ದೆಯನ್ವಯ ಸರ್ಕಾರದ ಕೋಟಾದಲ್ಲಿ ಎಂಬಿಬಿಎಸ್ ವ್ಯಾಸಂಗ ಪೂರೈಸಿದ ವೈದ್ಯರು ಒಂದು ವರ್ಷದ ಅವಧಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ಪೂರೈಸಬೇಕಾಗುತ್ತದೆ. ತಪ್ಪಿದಲ್ಲಿ ಅಂತಹ ವೈದ್ಯರುಗಳು 10 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. 2013ರ ಕಾಯ್ದೆಯನ್ವಯ ಇದೇ ಪ್ರಕರಣದಲ್ಲಿ ವೈದ್ಯರು 50 ಲಕ್ಷ ರೂ. ದಂಡ ಮತ್ತು ಸ್ನಾತಕೋತ್ತರ ಡಿಪ್ಲೋಮ ಪೂರೈಸಿದ ವೈದ್ಯರು 25 ಲಕ್ಷ ರೂ. ದಂಡ ನೀಡಬೇಕಾಗುತ್ತದೆ. ಹೀಗೆ ಕಾಯ್ದೆಗಳು ಕಾಲ ಕಾಲಕ್ಕೆ ತಿದ್ದುಪಡಿಯಾಗುತ್ತಿದ್ದು, ಈ ಕಾಯ್ದೆಗೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆಯೆಂದು ಸಚಿವ ತುಕಾರಾಂ ಸ್ಪಷ್ಟಪಡಿಸಿದರು.

ಸ್ನಾತಕೋತ್ತರ ಪದವಿ ಪೂರೈಸಿರುವ ವೈದ್ಯರು 2019-20ನೇ ಸಾಲಿನಲ್ಲಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಲು ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿರುವ ವೈದ್ಯರುಗಳ ವಿರುದ್ಧ ದಂಡ ವಸೂಲು ಮಾಡಲು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಲು ಅಗತ್ಯವಿರುವ ಶುಲ್ಕ ಪಾವತಿಯ ಕುರಿತು ಕಾನೂನು ಇಲಾಖೆಯ ಸಲಹೆಯನ್ನು ಕೋರಲಾಗಿದೆಯೆಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News