ಕೊಡಗಿನ 33 ಸಾವಿರ ರೈತರ 264 ಕೋಟಿ ರೂ.ಸಾಲ ಮನ್ನಾ ಗುರಿ: ಸಚಿವ ಬಂಡೆಪ್ಪ ಕಾಶೆಂಪೂರ

Update: 2019-07-16 17:54 GMT

ಮಡಿಕೇರಿ, ಜು.16: ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸಾಲ ಪಡೆದ 32,903 ರೈತರ 263.82 ಕೋಟಿ ರೂ.ಗಳ ಬೆಳೆ ಸಾಲ ಮನ್ನಾ ಆಗಲಿರುವುದಾಗಿ ಅಂದಾಜಿಸಲಾಗಿದ್ದು, ಈ ಪೈಕಿ ಸರಕಾರದ ಆದೇಶದ ಎಲ್ಲಾ ಷರತ್ತುಗಳನ್ನು ಪೂರೈಸಿದ 14,678 ಮಂದಿಯ 101.10 ಕೋಟಿ ರೂ.ಗಳ ಸಾಲಮನ್ನಾ ಮಾಡಲು ಗುರುತಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ.ಪಿ.ಸುನಿಲ್‍ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಡಿಕೇರಿ ತಾಲೂಕಿನ 4385 ರೈತರ 3417.87 ಲಕ್ಷ, ವೀರಾಜಪೇಟೆ ತಾಲೂಕಿನ 7378 ರೈತರ 4607.59 ಲಕ್ಷ ಹಾಗೂ ಸೋಮವಾರಪೇಟೆ ತಾಲೂಕಿನ 2915 ರೈತರ 2084.54 ಲಕ್ಷ ರೂ.ಗಳ ಸಾಲ ಮನ್ನಾ ಮಾಡಲು ಸರಕಾರ ಗುರುತಿಸಿದೆ ಎಂದು ವಿವರಿಸಿದ್ದಾರೆ.

ಅಲ್ಲದೆ ವಾಣಿಜ್ಯ ಬ್ಯಾಂಕುಗಳ ಬೆಲೆ ಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಜುಲೈ -2019ರವರೆಗೆ 3656 ರೈತರಿಗೆ ಒಟ್ಟು 22.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾಲ ಮನ್ನಾ ಮಾಡಲು ಗುರುತಿಸಿರುವ ಎಲ್ಲಾ 14732 ಅರ್ಹ ರೈತರಿಗೆ ಈಗಾಗಲೇ ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ನಿರಕ್ಷೇಪಣಾ ಪತ್ರ ನೀಡಲಾಗಿದ್ದು, ಹೊಸದಾಗಿ 27,218 ರೈತರಿಗೆ 399.43 ಕೋಟಿ ರೂ.ಗಳ ಬೆಳೆ ಸಾಲ ವಿತರಿಸಲಾಗಿದೆ ಎಂದು ಕಾಶೆಂಪೂರ ಅವರು ಸುನಿಲ್ ಸುಬ್ರಮಣಿ ಅವರು ಉಪ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕೊಡಗು ಜಿಲ್ಲೆಯ ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ರೈತರಿಗೆ 2019-20ನೇ ಸಾಲಿನಲ್ಲಿ ಅಲ್ಪಾವಧಿ ಸಾಲವನ್ನು ನೀಡಲಾಗಿಲ್ಲ. ಜಿಲ್ಲೆಯ ಒಟ್ಟು 3 ಪಿಎಲ್‍ಡಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲವನ್ನು ನೀಡುವುದು ಈ ಬ್ಯಾಂಕ್‍ಗಳ ಉದ್ದೇಶವಾಗಿದೆ. ಬೆಳೆ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವಿತರಿಸುತ್ತಿದ್ದು, ಇದುವರೆಗೆ 27,218 ರೈತರಿಗೆ 399.43 ಕೊಟಿ ಬೆಳೆ ಸಾಲ ವಿತರಿಸಲಾಗಿದೆ. ಉಳಿದ ಎಲ್ಲಾ ಅರ್ಹ ರೈತರಿಗೆ ಜುಲೈ ತಿಂಗಳಿನಲ್ಲಿ ಸಾಲ ವಿತರಿಸಲು ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅದರಂತೆ ಮಡಿಕೇರಿ ತಾಲೂಕಿನಲ್ಲಿ 7942 ಮಂದಿಗೆ 10237.26 ಲಕ್ಷ, ಸೋಮವಾರಪೇಟೆ ತಾಲೂಕಿನ 10381 ರೈತರಿಗೆ 14862. 77 ಲಕ್ಷ ಹಾಗೂ ವೀರಾಜಪೇಟೆ ತಾಲೂಕಿನ 8895 ರೈತರಿಗೆ 14842.67 ಲಕ್ಷ ರೂ.ಗಳನ್ನು ವಿತರಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News