ಸುಪ್ರೀಂ ಕೋರ್ಟ್ ಆದೇಶವೇ ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಲಿದೆಯೇ?

Update: 2019-07-17 08:43 GMT

ಬೆಂಗಳೂರು, ಜು. 17: ಅತೃಪ್ತ ಶಾಸಕರು ಹಾಗು ಸ್ಪೀಕರ್ ಅವರ ಅರ್ಜಿ ಕುರಿತು ಬುಧವಾರ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮೇಲ್ನೋಟಕ್ಕೆ ಸ್ಪೀಕರ್ ಹಾಗು ಮೈತ್ರಿ ಸರಕಾರಕ್ಕೆ ಪರವಾಗಿರುವಂತೆ ಕಂಡು ಬಂದಿದ್ದರೂ ಅದೇ ಆದೇಶ  ರಾಜ್ಯದ ಮೈತ್ರಿ ಸರಕಾರದ ಪತನಕ್ಕೆ ಪರೋಕ್ಷ ಕಾರಣವಾಗಲಿದೆಯೇ ? 

ಸುಪ್ರೀಂ ಕೋರ್ಟ್ ಆದೇಶದ ಕುರಿತ ಗೊಂದಲ ಹಾಗು ಆ ಬಗ್ಗೆ ಎದ್ದಿರುವ ಪ್ರಶ್ನೆಗಳು ಇಂತಹ ಸಂಶಯವನ್ನು ಸೃಷ್ಟಿಸಿವೆ. ಶಾಸಕರ ರಾಜೀನಾಮೆ ಹಾಗು ಅನರ್ಹತೆ ಕುರಿತು ಸ್ಪೀಕರ್ ಅವರೇ ತೀರ್ಮಾನ ಮಾಡಲಿದ್ದಾರೆ ಹಾಗು ಅದಕ್ಕೆ ತಾನು ಸಮಯ ಮಿತಿ ನಿಗದಿ ಮಾಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. 

ಆದರೆ ಸಮಸ್ಯೆ ಇರುವುದು ಆ ಬಳಿಕದ ಆದೇಶದ ಭಾಗದಲ್ಲಿ. ಅದರಲ್ಲಿ ಅತೃಪ್ತ ಶಾಸಕರನ್ನು ಅವರ ಕುರಿತ ಅಂತಿಮ ತೀರ್ಮಾನ ಬರುವವರೆಗೆ ವಿಧಾನಸಭೆಯ ಕಲಾಪಕ್ಕೆ ಬರುವಂತೆ ಒತ್ತಡ ಹೇರಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರರ್ಥ ಏನು ಎಂಬುದು ಈಗ ಮೈತ್ರಿ ಸರಕಾರದ ಭವಿಷ್ಯ ನಿರ್ಧರಿಸಲಿದೆ. 

ಏಕೆಂದರೆ ಅತೃಪ್ತರಿಗೆ ವಿಪ್ ನೀಡಿ ಅವರು ಅದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಅನರ್ಹತೆ ಅಸ್ತ್ರ ಬಳಸುವುದು ಕಾಂಗ್ರೆಸ್ ಜೆಡಿಎಸ್ ರಣತಂತ್ರ. ಆದರೆ ಒತ್ತಡ ಹಾಕಬಾರದು ಎಂದು ಕೋರ್ಟ್ ಹೇಳಿರುವುದರ ಅರ್ಥವೇನು? ವಿಪ್ ನೀಡಬಾರದು ಎಂದೇ? ವಿಪ್ ನೀಡಬಾರದು ಎಂದು ನೇರವಾಗಿ ಸುಪ್ರೀಂ ಕೋರ್ಟ್ ಹೇಳಿಲ್ಲ. ಆದರೆ ಒತ್ತಡ ಹಾಕಬಾರದು ಎಂದಿದೆ. ಇಲ್ಲೇ ಇದೆ ಸಮಸ್ಯೆ. 

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಈ ಅತೃಪ್ತ ಶಾಸಕರು ನಾಳೆ ವಿಶ್ವಸಮತದ ಕಲಾಪದ ವೇಳೆ ಭಾಗವಹಿಸಬಹುದು ಅಥವಾ ಭಾಗವಹಿಸದೆಯೂ ಇರಬಹುದು. ಭಾಗವಹಿಸಿ ಸರಕಾರದ ವಿರುದ್ಧ ಮತಚಲಾಯಿಸಿದರೆ ಸರಕಾರ ಪತನ ನಿಶ್ಚಿತ. 

ಅಂದರೆ ಈ ಅತೃಪ್ತರ ವಿರುದ್ಧ ವಿಪ್ ಅಸ್ತ್ರ ಬಳಸದಂತೆ ತಡೆದು ಅದೇ ಸಂದರ್ಭದಲ್ಲಿ ಅವರು ಕಲಾಪದಲ್ಲಿ ಭಾಗವಹಿಸಿ ಸರಕಾರದ ವಿರುದ್ಧ ಮತಚಲಾಯಿಸಲು ಅವಕಾಶ ನೀಡಿತೆ ಸುಪ್ರೀಂ ಆದೇಶ? ಹೀಗೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News